ಹೊನಗುಂಟಾ ಗ್ರಾಮದ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಹಾಲುಮತದ ಪಟ್ಟದ ಪೂಜಾರಿ, ಜಡೆ ಪೂಜಾರಿಗಳ ಧರ್ಮ ಸಭೆಯಲ್ಲಿ ಕಲಬುರಗಿ, ವಿಜಯಪುರ ಹಾಗೂ ಯಾದಗಿರಿಯಿಂದ ಭಾಗವಹಿಸಿದ್ದ ಪೂಜಾರಿಗಳು.  
ಜಿಲ್ಲೆ

ಪೂಜಾರಿಗಳಿಗೆ ಸರ್ಕಾರ ಸೌಕರ್ಯ ನೀಡಲಿ

ಶಹಾಬಾದ್: ಸಮಾಜದ ಪಟ್ಟದ ಪೂಜಾರಿ ಹಾಗೂ ಜಡೆತಲೆ ಪೂಜಾರಿಗಳ ಧರ್ಮದ ವಸ್ತುಗಳಾದ ಭಂಡಾರ, ಡೊಳ್ಳು, ಬೆತ್ತ, ಕಂಬಳಿ ಹಾಲುಮತದ ಪೂಜನೀಯ ವಸ್ತುಗಳಾಗಿದ್ದು, ಅವುಗಳನ್ನು ಶ್ರದ್ಧೆಯಿಂದ ಬಳಸಬೇಕು. ಸರ್ಕಾರ ಹಾಲುಮತದ ಪೂಜಾರಿಗಳಿಗೆ ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣ, ದೇವಸ್ಥಾನಗಳಿಗೆ ಅನುದಾನ ನೀಡಬೇಕೆಂದು ವಿಜಯಪುರ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೀರಪ್ಪ ಜುಮನಾಳ ಆಗ್ರಹಿಸಿದರು.

ಹೊನಗುಂಟಾ ಗ್ರಾಮದ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯ ಹಾಲುಮತದ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಹಾಲುಮತದ ಪೂಜ್ಯರು ಒಂದಾಗಿ ವ್ಯಸನಮುಕ್ತ ಸಮಾಜ ನಿರ್ಮಿಸಲು ಮುಂದಾಗಬೇಕು. ಉತ್ತಮ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಮಾಲಹಳ್ಳಿಯ ಕೆಂಚರಾಯ ಹೇಳಿದರು.

ಮಾಳಿಂಗರಾಯ ಸಾನ್ನಿಧ್ಯ, ಪದ್ಮಣ್ಣ ಮುತ್ಯಾ ಅಧ್ಯಕ್ಷತೆ ವಹಿಸಿದ್ದರು. ಶಿರಸಗಿ ಬೀರೇಶ್ವರ ಮಠದ ಬೀರಣ್ಣ ಮುತ್ಯಾ, ಬಸವಪಟ್ಟಣದ ಮರೆಪ್ಪ ಮುತ್ಯಾ ಮಾತನಾಡಿದರು.

ತಿಡುಂಗಿ ಬಸನಸಿದ್ದ ಮಹಾರಾಜ್, ಬೀರಪ್ಪ ಪೂಜಾರಿ, ಸಿದ್ದು ಪೂಜಾರಿ, ಶಂಕರ ಪೂಜಾರಿ, ರಾಜು ಪೂಜಾರಿ, ಶಿವಪ್ಪ ಪೂಜಾರಿ, ರಾಮಣ್ಣ ಪೂಜಾರಿ ಹೊಸೂರ, ಬರ್ಮಣ್ಣ ಪೂಜಾರಿ ತಳವಾಡ, ಕಲ್ಲಪ್ಪ ಪೂಜಾರಿ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ, ಸಾಬಣ್ಣ ಕೊಲ್ಲೂರ, ಮಲ್ಕಣ್ಣ ಮುದ್ದಾ, ರೇವಣಸಿದ್ದ ಪಾರಾಗಾರ, ಶಿವು ಪೂಜಾರಿ ಭಂಕೂರ, ವಿಜಯ ಕಂಠಿಕರ್ ಇತರರಿದ್ದರು.

ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನೆರವೇರಿತು. ಜಟ್ಟಿಂಗೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನದಲ್ಲಿ ಶ್ರೀಗಳಿಂದ ವಿಶೇಷ ಪೂಜೆ ಜರುಗಿತು.