ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಭಾವೈಕ್ಯ ದಿನ ನಿಮಿತ್ತ ಗದಗನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು ಇತರರಿದ್ದರು. 
ಜಿಲ್ಲೆ

ಪುಸ್ತಕ ಸಂಸ್ಕೃತಿಗೆ ಜೀವ ತುಂಬಿದ ತೋಂಟದ ಶ್ರೀ

ಭಾಲ್ಕಿ: ಗದಗನ ತೋಂಟದಾರ್ಯ ಸಂಸ್ಥಾನದ ಮಠದ ಶ್ರೀ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪುಸ್ತಕ ಸಂಸ್ಕೃತಿಗೆ ಜೀವ ತುಂಬುವ ಕಾರ್ಯ ಮಾಡಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗದಗನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಜಯಂತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಭಾವೈಕ್ಯ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗದ್ಗುರುಗಳು ಭಾವೈಕ್ಯತೆ ಮೆರೆದ ಮಹಾ ಮೇಧಾವಿಯಾಗಿದ್ದರು. ಎಲ್ಲರನ್ನು ಇವನಮ್ಮವ ಇವನಮ್ಮವ ಎನ್ನುವ ಬಸವವಾಣಿಯಂತೆ ಅಪ್ಪಿಕೊಳ್ಳುವ ವಿಶಾಲ ಹೃದಯ ಅವರಲ್ಲಿತ್ತು. ಪುಸ್ತಕ ಪ್ರೀತಿಸಿದ ಪೂಜ್ಯರನ್ನು ಪುಸ್ತಕದ ಜಗದ್ಗುರುಗಳೆಂದೇ ಕರೆಯಲಾಗುತ್ತಿತ್ತು ಎಂದು ಹೇಳಿದರು.

ಶ್ರೀಮಠದಿಂದ ಅವರು ಪ್ರಕಟಿಸಿದ ಪುಸ್ತಕಗಳು ನಾಡಿನ ಚರಿತ್ರೆ ಕಟ್ಟುವ ದಿಶೆಯಲ್ಲಿ ಅಮೂಲ್ಯವಾಗಿವೆ. ತೋಂಟದಾರ್ಯ ಜಾತ್ರೆಯನ್ನು ಸರ್ವಜನಾಂಗದ ಜಾತ್ರೆಯನ್ನಾಗಿ ಮಾಡಿದರು. ಭಾಲ್ಕಿ ಹಿರೇಮಠದ ಬೆಳವಣಿಗೆಗೆ ಹಿಂದೆ ಜಗದ್ಗುರುಗಳ ಆಶೀರ್ವಾದ ಮತ್ತು ಪ್ರೇರಣೆ ಇದೆ ಎಂದು ಸ್ಮರಿಸಿದರು.

ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಬಸವ ದೇವರು, ಶ್ರೀ ಪ್ರಭುಲಿಂಗ ದೇವರು ಸಮ್ಮುಖ ವಹಿಸಿದ್ದರು.

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಿಬ್ಬಂದಿ, ಗುರುಪ್ರಸಾದ ಶಾಲೆಯ ಸಿಬ್ಬಂದಿ ಇದ್ದರು. ರಾಜು ಜುಬರೆ ನಿರೂಪಣೆ ಮಾಡಿದರು.

ಭಾಲ್ಕಿಯ ಹಿರೇಮಠಕ್ಕೂ ಗದಗನ ತೋಂಟದಾರ್ಯ ಮಠಕ್ಕೂ ಅವಿನಾಭಾವ ಸಂಬಂಧವಿದೆ. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಕಾರ್ಯಕ್ಕೆ ಜಗದ್ಗುರುಗಳು ಬಹುದೊಡ್ಡ ಶಕ್ತಿಯಾಗಿದ್ದರು. ಪೂಜ್ಯರಿಗೆ ಕಷ್ಟ ಬಂದಾಗ ಜಗದ್ಗುರುಗಳು ಅವರ ಹಿಂದೆ ನಿಂತು ಅವರಿಗೆ ಅಭಯ ನೀಡಿದ್ದರು.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ