ಹಾಸನ: ಸಾವಿರ ಉದ್ಯಮಗಳನ್ನು ಹುಟ್ಟು ಹಾಕುವುದು ಕಷ್ಟದ ಕೆಲಸವಲ್ಲ. ಆದರೆ ಪುಸ್ತಕ ಸಂಸ್ಕೃತಿಯನ್ನು ಹುಟ್ಟು ಹಾಕುವುದು ಬಹಳ ಕಷ್ಟದ ಕೆಲಸವಾಗಿದ್ದು, ಪುಸ್ತಕ ಸಂಸ್ಕೃತಿಯನ್ನು ಹುಟ್ಟು ಹಾಕಿದ ಅಕ್ಷರ ಬುಕ್ ಹೌಸ್ ಮಾಲೀಕರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ಸುವರ್ಣ ಕರ್ನಾಟಕ ಪುರಸ್ಕೃತರಾದ ಭಾನು ಮುಷ್ತಾಕ್ ತಿಳಿಸಿದರು.
ನಗರದ ಶಂಕರಮಠದ ರಸ್ತೆಯಲ್ಲಿರುವ ಅಕ್ಷರ ಬುಕ್ ಹೌಸ್ ಆವರಣದಲ್ಲಿ ಶುಕ್ರವಾರ ಅಕ್ಷರ ಬುಕ್ ಹೌಸ್ ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಲೋಕಕ್ಕೆ ಮುಕುಟಮಣಿಗಳನ್ನು ಕೊಟ್ಟಂತಹ ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಒಂದು ಉತ್ತಮ ಪುಸ್ತಕ ಮಳಿಗೆ ಇಲ್ಲವೆಂಬ ಕೊರಗು ಎಲ್ಲರನ್ನೂ ಕಾಡುತಿತ್ತು. ಸಾಹಿತ್ಯ ಪ್ರಿಯರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ದಶಕದ ಹಿಂದೆಯೇ ನಗರದಲ್ಲಿ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿ ಸಾಹಿತ್ಯಾಸಕ್ತರನ್ನು ಹೆಚ್ಚು ಹೆಚ್ಚು ಸೆಳೆದು ಮತ್ತಷ್ಟು ಸಾಹಿತ್ಯಾಭಿರುಚಿಯನ್ನು ಮೂಡಿಸುವಲ್ಲಿ ಅಕ್ಷರ ಬುಕ್ ಹೌಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಸುವರ್ಣ ಕರ್ನಾಟಕ ಪುರಸ್ಕೃತರಾದ ಎಚ್.ಬಿ. ಮದನಗೌಡ ಮಾತನಾಡಿ, ಒಂದು ಉತ್ತಮ ಕೆಲಸವನ್ನು ಮಾಡುವಾಗ ಅಡೆ - ತಡೆಗಳೇ ಹೆಚ್ಚಾಗಿರುತ್ತವೆ. ಅವುಗಳೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಅಕ್ಷರ ಬುಕ್ ಹೌಸ್ ಪ್ರಾರಂಭಿಸುವ ಹಂತದಲ್ಲಿಯೇ ನಕಾರಾತ್ಮಕ ಮಾತುಗಳಿಂದಲೇ ಉತ್ಸಾಹವನ್ನು ಕುಗ್ಗಿಸುವ ಪ್ರಯತ್ನ ಮಾಡಿದವರೇ ಹೆಚ್ಚು. ಅಂತಹ ಸಂದರ್ಭದಲ್ಲಿಯೂ ಎದೆಗುಂದದೇ, ತಮ್ಮ ಉತ್ಸಾಹವನ್ನು ಕುಗ್ಗಿಸಿಕೊಳ್ಳದೇ ಮುಂದೆ ಸಾಗಿದ ಫಲವೇ ಅಕ್ಷರ ಬುಕ್ ಹೌಸಿನ ದಶಕದ ಇಂದಿನ ಯಶಸ್ಸು. ಯಾವುದೇ ಕೆಲಸವಾದರು ಅಚ್ಚುಕಟ್ಟುತನವನ್ನು ಕಾಪಾಡುವ, ಶಿಸ್ತಿನ ಸಂಘಟನೆಯನ್ನು ಮಾಡುವ ಸಹೋದರ ಗಂಗಾಧರ್ ಅವರ ಶ್ರಮ ಅಪರಿಮಿತವಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಅಕ್ಷರ ಪುಸ್ತಕ ಮಳಿಗೆ ರಾರಾಜಿಸಲಿ ಎಂದರು.
ಅಕ್ಷರ ಬುಕ್ ಹೌಸ್ ಮಾಲೀಕ ಟೈಮ್ಸ್ ಗಂಗಾಧರ್ ಮಾತನಾಡಿ, ದಶಕಕ್ಕೆ ಕಾಲಿಟ್ಟಿರುವ ಅಕ್ಷರದ ಎಲ್ಲ ಯಶಸ್ಸು ಕೂಡ ಜಿಲ್ಲೆಯ ಸಾಹಿತ್ಯಸಾಕ್ತರಿಗೆ ಸಲ್ಲಬೇಕು. ಪುಸ್ತಕವನ್ನು ಓದುವವರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಹೇಳುವವರ ಮಾತಿಗೆ ವ್ಯತಿರಿಕ್ತವಾಗಿ ಅಕ್ಷರದ ಯಶಸ್ಸಿಗೆ ಸಹಕರಿಸಿದವರು ಸಾಹಿತ್ಯಕ್ಕಾಗಿ ಮಿಡಿಯುವ ಹಾಸನ ಜಿಲ್ಲೆಯ ಜನರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಪ್ರಾರಂಭದ ದಿನದಿಂದ ಅಕ್ಷರ ನಮ್ಮದು ಎಂದು ಸದಾ ಅಕ್ಷರದ ಜತೆಗೆ ನಿಂತ ಸ್ನೇಹಿತರನ್ನು ಸದಾ ನಾವು ಸ್ಮರಿಸಲೇಬೇಕು. ಅಕ್ಷರ ಬುಕ್ ಹೌಸ್ ಈ ಜಿಲ್ಲೆಯ ಸಾಹಿತ್ಯ ಬಳಗದ್ದು, ಹೊಸ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮುಂದೆಯೂ ಕೂಡ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ನಿಮ್ಮ ಸಹಕಾರ ಅತ್ಯಗತ್ಯವಾಗಿದ್ದು, ಅಕ್ಷರವನ್ನು ಕೈಹಿಡಿದು ನೆಡೆಸುವ ಹೊಣೆಗಾರಿಗೆ ಜಿಲ್ಲೆಯ ಸಾಹಿತ್ಯ ಪ್ರಿಯರದ್ದು. ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬುಕ್ ಹೌಸ್‌ಗೆ ಭೇಟಿ ನೀಡಬಹುದಾಗಿದೆ. ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಒಂದು ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಡುವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಡಾ.ಪಿ. ಶಿವಕುಮಾರ್, ಸಾಹಿತಿಗಳಾದ ಸುಶೀಲಾ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಟೈಮ್ಸ್ ಶಾಲೆಯ ಸಿಬ್ಬಂದಿ ಅರ್ಜುನ್, ಮಂಜುನಾಥ್ ಹಾಗೂ ಇತರರು ಹಾಜರಿದ್ದರು.