ಕೆ. ಆರ್.ಚಂದ್ರಶೇಖರ್ ಲಕ್ಕೂರು
ಸುಮಾರು 20 ಲಕ್ಷ ಪುಸ್ತಕಗಳ ಸಂಗ್ರಹವಿರುವ "ಪುಸ್ತಕ ಮನೆ' ಖ್ಯಾತಿಯ ಸಾಹಿತಿ ಹರಿಹರಪ್ರಿಯ ಅವರು ಈಗ ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದು, ಪುಸ್ತಕಮನೆಯನ್ನು ಮುಚ್ಚಿದ್ದಾರೆ. ಅಪಾರ ಸಂಖ್ಯೆಯ ಪುಸ್ತಕಗಳನ್ನು ನಿರ್ವಹಣೆ ಮಾಡಲಾಗದೆ, ಮಾಲೂರಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗ ಮಂದಿರದ ಮುಂಭಾಗ ಭಾರವಾದ ಮನಸ್ಸಿನಿಂದ ಮಾರಾಟಕ್ಕೆ ಇಡುವ ಪರಿಸ್ಥಿತಿ ಅವರದಾಗಿದೆ. ಸರ್ಕಾರ ಹಾಗೂ ಸಮಾಜ ಈಗಲಾದರೂ ಮನಸ್ಸು ಮಾಡಿದರೆ ಆ ಅಪಾರ ಜ್ಞಾನ ಭಂಡಾರವನ್ನು ರಸಬಹುದಾಗಿದೆ.
ಕನ್ನಡ ಸಾಹಿತ್ಯ ರಚನೆಯಲ್ಲಿ ಸಾಹಿತಿಗಳ ಶ್ರಮ ಎಷ್ಟಿದೆಯೋ, ಪುಸ್ತಕಗಳನ್ನು ಓದುಗರ ಕೈ ಸೇರುವಂತೆ ಮಾಡುವವರ ಪಾಲೂ ಅದಕ್ಕಿಂತಲೂ ಹೆಚ್ಚಿದೆ. ಆಧುನಿಕ ಪ್ರಪಂಚ ತಂತ್ರಜ್ಞಾನಕ್ಕೆ ಹೊಂದಿಕೊಂಡು ಪುಸ್ತಕ ಪ್ರಪಂಚವನ್ನೇ ಮರೆತಿರುವಾಗ ಪುಸ್ತಕ ಸಂಗ್ರಹ ಮಾಡಿರುವವರ ಮತ್ತು ಮಾರಾಟ ಮಾಡುತ್ತಿರುವವರ ಪಾಡು ಹೇಳತೀರದಾಗಿದೆ. ಹರಿಹರಪ್ರಿಯ ಅವರಿಗೂ ಅಂಥದೇ ದುರ್ಗತಿ ಬಂದೊದಗಿದೆ.
ಮಾಲೂರು ತಾಲೂಕಿನಲ್ಲಿ ಹಿಂದಿನಿಂದಲೂ ಅನೇಕ ಸಾಹಿತಿಗಳೊಂದಿಗೆ ಗುರುತಿಸಿಕೊಂಡು ಸಾಹಿತ್ಯ ಕೃಷಿಯ ಜತೆಗೆ ಪುಸ್ತಕ ಸಂಗ್ರಹಕಾರರಾಗಿ ಪ್ರಸಿದ್ಧರಾದವರು ಹರಿಹರಪ್ರಿಯ. ಆದರೆ ಅವರನ್ನು ಸರ್ಕಾರ ಗುರುತಿಸದಿರುವುದು, ಪುಸ್ತಕ ನಿರ್ವಹಣೆಗೆ ನೆರವಾಗದಿರುವುದು ವಿಪರ್ಯಾಸ. ಹೆಸರಾಂತ ಸಾಹಿತಿಗಳಾದ ತೀತಾ ಶರ್ಮ, ಕುವೆಂಪು, ಶ್ರೀರಂಗ, ಪು.ತಿ.ನ, ಎಂ.ಎಂ.ಕಲಬುರ್ಗಿ, ಮಾಸ್ತಿ, ಗೋರೂರು, ರಂ.ಶ್ರೀಮುಗುಳಿ, ಅ.ನ.ಕೃ, ಬೀಚಿ, ಎಸ್.ಎಲ್.ಬೈರಪ್ಪ, ಎಚ್ಎಸ್ಕೆ, ಶಂಬಾ ಜೋಷಿ, ಚಂದ್ರಶೇಖರ ಪಾಟೀಲ್, ಜಿ.ಎಸ್.ಶಿವರುದ್ರಪ್ಪ, ಚನ್ನವಿರಕಣವಿ, ಚದುರಂಗ, ಬಸವರಾಜ ಕಟ್ಟಿಮನಿ, ಲಂಕೇಶ್ ಮೊದಲಾದವರ ಒಡನಾಟದಲ್ಲಿ ಬೆಳೆದವರು ಹರಿಹರಪ್ರಿಯ. ಸ್ವತ@ ಕನ್ನಡ ಹಾಗೂ ತೆಲುಗಿನಲ್ಲಿ 200ಕ್ಕೂ ಹೆಚ್ಚು ಪುಸ್ತಕ ರಚಿಸಿದವರು. ಮಾಲೂರು& -ಹೊಸೂರು ಮುಖ್ಯರಸ್ತೆಯ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರೀನ್ ಸಿಟಿ ಕಾಲೇಜು ಪಕ್ಕದಲ್ಲಿ ಕರ್ನಾಟಕ ಗೃಹ ಮಂಡಳಿ ನಿಮಾರ್ಣ ಮಾಡಿರುವ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಪುಸ್ತಕ ಮನೆ ನಿಮಾರ್ಣ ಮಾಡಿದ್ದಾರೆ. ಆದರೆ ಈಗ ಮೂಲ ಸೌಕರ್ಯ ಹಾಗೂ ಭದ್ರತೆ ಇಲ್ಲದೆ ಸಂಕಟ ಪಡುವಂತಾಗಿದೆ.
ನಿವೇಶನದಲ್ಲಿ ಸ್ಥಳಾವಕಾಶವೂ ಕಡಿಮೆ ಇದ್ದು, ಸರ್ಕಾರದ ಸಹಕಾರವಿದ್ದರೆ ಅಧ್ಯಯನ ಕೇಂದ್ರ ಸ್ಥಾಪಿಸಿ ಲಕ್ಷಾಂತರ ಓದುಗರಿಗೆ ಅನುಕೂಲ ಮಾಡಬೇಕೆಂಬುದು ಹರಿಹರಪ್ರಿಯ ಅವರ ಕನಸಾಗಿದೆ. ಆದರೆ 60 ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಕೋಟ್ಯಂತರ ರೂ. ಬೆಲೆ ಬಾಳುವ ಜ್ಞಾನ ಬಂಡಾರವನ್ನು ಅವರಿಗೀಗ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. 74 ವರ್ಷದ ಹರಿಹರಪ್ರಿಯ ಅಸಹಾಯಕರಾಗಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಯ 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿದ್ದ ಇವರು ಪ್ರಸ್ತುತ ಯಾವುದೇ ರಕ್ಷಣೆ ಇಲ್ಲದೆ ಒಂಟಿ ಜೀವನ ಕಳೆಯುವಂತಾಗಿದೆ. ಭದ್ರತೆ ಇಲ್ಲದೆ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳು ಬಾಗಿಲು ಬಡಿದು ತೊಂದರೆ ನೀಡುತ್ತಿರುವುದು ಹರಿಹರ ಪ್ರಿಯ ಅವರ ಮನಸ್ಸಿಗೆ ನೋವುಂಟು ಮಾಡಿದೆ.
200ಕ್ಕೂ ಹೆಚ್ಚು ಕೃತಿಗಳ ರಚನೆ: ಸಾಹಿತಿ ಹರಿಹರ ಪ್ರಿಯ ಅವರು ಸೃಜನಶೀಲ ಕೃತಿಗಳು, ವಿಮರ್ಶಾ ಕೃತಿಗಳು, ಅಂಕಣ ಕೃತಿಗಳು, ತೌಲನಿಕ ಅಧ್ಯಯನ, ವ್ಯಕ್ತಿ ಚಿತ್ರ, ಅನುವಾದ ಕೃತಿಗಳು, ಕನ್ನಡದಿಂದ ತೆಲುಗಿಗೆ, ತೆಲುಗಿನಿಂದ ಕನ್ನಡಕ್ಕೆ, ಕುವೆಂಪು ಕುರಿತು ಪತ್ರ ಸಾಹಿತ್ಯ, ಸಂಪಾದಿತ ಕೃತಿಗಳು, ಸಮಗ್ರ ಸಂಪುಟಗಳು ಸೇರಿ ಸುಮಾರು 200ಕ್ಕೂ ಹೆಚ್ಚು ಕೃತಿಗಳ ರಚನೆ ಮಾಡಿದ್ದಾರೆ.
ಜಿಲ್ಲೆಯ ಸಾಹಿತಿ ಹರಿಹರಪ್ರಿಯ ಅವರನ್ನು ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಕನ್ನಡ ಸಂಘಗಳು ಗುರುತಿಸುವ ಕೆಲಸವಾಗಬೇಕು. ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ಹರಿಹರಪ್ರಿಯ ಅವರನ್ನು ಆಯ್ಕೆ ಮಾಡುವ ಮೂಲಕ ಗೌರವ ನೀಡಬೇಕು. ಜಿಲ್ಲೆಯಲ್ಲಿ ಸಾಕಷ್ಟು ವಿವಿಗಳಿದ್ದರೂ ಯಾವೊಬ್ಬ ಪ್ರಾಧ್ಯಾಪಕ, ಹಾಗೂ ಶಿಕ್ಷಣ ಕ್ಷೇತ್ರದ ಅಧಿಕಾರಿ ಪುಸ್ತಕ ಮನೆ ಬಳಕೆ ಮಾಡಿಕೊಳ್ಳದಿರುವುದು ದುರಂತ.
ನಾಗಾನಂದ ಕೆಂಪರಾಜ್, ಕಸಾಪ, ಮಾಜಿ ಜಿಲ್ಲಾಧ್ಯಕ್ಷ
ಪುಸ್ತಕ ಮನೆಯಲ್ಲಿ ಲಕ್ಷಾಂತರ ಪುಸ್ತಕಗಳಿಗೆ ರಕ್ಷಣೆಯಿಲ್ಲದಾಂತಾಗಿದೆ. ತಗಡಿನ ಮೇಲ್ಛಾವಣಿ ಮಳೆಗಾಲದಲ್ಲಿ ತೊಟ್ಟಿಕುತ್ತಿರುವುದರಿಂದ ಸಾವಿರಾರು ಪುಸ್ತಕಗಳು ಮಳೆ ನೀರಲ್ಲಿ ನೆಂದು ಹಾಳಾಗಿದೆ. ಕಪಾಟುಗಳಿಲ್ಲದೆ ಇರುವುದರಿಂದ ಪುಸ್ತಕ ರಕ್ಷಣೆ ಮಾಡುವುದು ಕಷ್ಟವಾಗಿದೆ. ರಾತ್ರಿ ನೋಡಿದ ಪುಸ್ತಕಗಳು ಬೆಳಗ್ಗೆ ಅರ್ಧ ಮಾಯವಾಗಿರುತ್ತದೆ. ಪುಸ್ತಕಗಳ ರಕ್ಷಣೆಗೆ ಕಬ್ಬಿಣ ಇಲ್ಲವೆ ಮರದ ಕಪಾಟುಗಳ ಅಗತ್ಯವಿದೆ.
ಹರಿಹರಪ್ರಿಯ ಸಾಹಿತಿ
ಗಡಿಭಾಗದಲ್ಲಿ ನಿಜವಾದ ಸಾಹಿತಿಯನ್ನು ಅಗೌರವದಿಂದ ಕಾಣುತ್ತಿರುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಮಾನ. ಇಲ್ಲಿ ಅಗಾಧವಾದ ಪುಸ್ತಕಗಳ ಸಂಗ್ರಹಣೆ ಇದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದೇಶದ ಯಾವುದೇ ವಿವಿಗಳಿಗೆ ಪುಸ್ತಕಮನೆ ವಿಶ್ವಕೋಶ ಎನ್ನಬಹುದು. ಸರ್ಕಾರ ಇಂತಹ ವಿಶೇಷ ಹಾಗೂ ವಿಭಿನ್ನತೆಯ ಗ್ರಂಥ ಭಂಡಾರ ಕಾಪಾಡಲು ಅನುಕೂಲ ಕಲ್ಪಿಸಬೇಕು.
ಜಿ.ಕೆಂಪಣ್ಣ ಅಧ್ಯಕ್ಷ ,ಗಡಿನಾಡು ಹಿತರಕ್ಷಣಾ ಸಮಿತಿ