ಹಿರೀಸಾವೆ ಹೋಬಳಿ ಕಸಾಪ ವತಿಯಿಂದ ಶನಿವಾರ ಬೆಳಗೀಹಳ್ಳಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಮೋದ್, ಪ್ರೊ.ಶಂಕರ್, ಶ್ರೀನಿವಾಸ್, ವಿವೇಕ್ ಇದ್ದರು. 
ಜಿಲ್ಲೆ

ಪುಸ್ತಕ ಕೊಂಡು ಓದಿ ಕನ್ನಡ ಸಾಹಿತ್ಯ ಸದೃಢಗೊಳಿಸಿ

ಹಿರೀಸಾವೆ: ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ನಮ್ಮ ಕನ್ನಡ ಸಾಹಿತ್ಯವನ್ನು ಇನ್ನು ಹೆಚ್ಚು ಸದೃಢಗೊಳಿಸಬೇಕು ಎಂದು ಕನ್ನಡ ಉಪನ್ಯಾಸಕಿ ಸ್ಮಿತಾ ದೊಡ್ಡರಂಗೇಗೌಡ ಹೇಳಿದರು.

ಹೋಬಳಿಯ ಬೆಳಗೀಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕವು ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಕನ್ನಡದ ನುಡಿ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಆದು ಕನ್ನಡಿಗರ ಹಬ್ಬ ಎಂದು ಆಚರಿಸೋಣ. ಮಾತೃಭಾಷೆಯನ್ನು ಸರಿಯಾಗಿ ಮಾತನಾಡುವುದು, ಬರೆಯುವುದು, ಓದುವುದು ಕಲಿತರೆ, ಇತರ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂದರು.

ಕನ್ನಡದ ಜತೆಯಲ್ಲಿ, ಪ್ರಪಂಚದ ವ್ಯವಹಾರಿಕ ಭಾಷೆಯಾದ ಇಂಗ್ಲಿಷ್ ಕಲಿಯುವುದನ್ನು ಮಕ್ಕಳು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದೆ ಎಂದು ಅಹಂಕಾರ ಪಡಬಾರದು. ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೊ ಎಚ್.ಪಿ. ಶಂಕರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಮಾತೃಭಾಷೆಯ ಸಾಹಿತ್ಯವನ್ನು ಉನ್ನತೀಕರಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿ, ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿವೇಕ್ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹತ್ತನೇ ತರಗತಿಯಲ್ಲಿ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹೋಬಳಿಯ ಎಲ್ಲ ಶಾಲೆಯ ವಿದ್ಯಾರ್ಥಿಗಳನ್ನು ಕಸಾಪ ವತಿಯಿಂದ ಅಭಿನಂದಿಸಲಾಯಿತು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಚ್.ಎ. ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶ್ರೀನಿವಾಸ್, ಕಸಾಪದ ಪದಾಧಿಕಾರಿಗಳಾದ ತೋಟಿ ಮಂಜು, ಮಾದಲಗೆರೆ ನಂಜೇಗೌಡ, ಹರೀಶ್, ಮಾರುತಿ ಮಂಜುನಾಥ್, ನರಸಿಂಹಮೂರ್ತಿ, ಬೋರೇಗೌಡ ವಕೀಲ ಮಂಜೇಶ್, ಪ್ರಗತಿವಾಸು, ಗೋವಿಂದಯ್ಯ, ಭಾರತಿ ಪುರುಷೋತ್ತಮ, ವಿನೋದ ಮಂಜೇಗೌಡ, ಶಾಲೆಯ ಶಿಕ್ಷಕರು ಇದ್ದರು.