ಜಿಲ್ಲೆ

ಪುಸ್ತಕ ಓದುವ ಸಂಸ್ಕೃತಿ ಕಣ್ಮರೆಯಾಗುತ್ತಿದೆ:ಬಿ.ಕೆ. ಗಂಗಾಧರ್

ಹಾಸನ: ಪುಸ್ತಕ ಓದುವ ಸಂಸ್ಕೃತಿ ಇಂದು ಕಣ್ಮರೆಯಾಗುತ್ತಿದ್ದು, ಯುವ ಜನಾಂಗವನ್ನು ಮತ್ತೊಮ್ಮೆ ಪುಸ್ತಕ ಓದುವ ಸಂಸ್ಕೃತಿಗೆ ಕರೆ ತರಬೇಕಾದ ಅವಶ್ಯಕತೆ ಇದೆ ಎಂದು ಅಕ್ಷರ ಬುಕ್ ಹೌಸ್ ಮುಖ್ಯಸ್ಥ ಬಿ.ಕೆ. ಗಂಗಾಧರ್ ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ಇತ್ತೀಚೇಗೆ ಅಕ್ಷರ ಬುಕ್ ಹೌಸ್ ಹಾಗೂ ಅಕ್ಷರ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಬುಕ್ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಸಂಸ್ಕೃತಿಯು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಬುಕ್ ಮಾತು ಹೊಸ ಬೆಳಕು ಚೆಲ್ಲಲಿದೆ. ಈ ಪಯಣದಲ್ಲಿ ಓದುಗರು ತಾವು ಓದಿದ ಪುಸ್ತಕವನ್ನು ಪರಿಚಯಿಸುತ್ತ ಅದರ ಹೂರಣವನ್ನು ಇತರೆ ಓದುಗರೊಂದಿಗೆ ಹಂಚಿಕೊಳ್ಳುವರು. ಈ ಪುಸ್ತಕ ಸಂಸ್ಕೃತಿ, ಪಯಣದೊಂದಿಗೆ ಜೊತೆಯಾಗಿ ಎಂದು ಎಂದರು.
ಕವಿ ಹಾಗೂ ’ಬ್ಲೂ ಬುಕ್’ ಪುಸ್ತಕ ವಿರಚಿತ ಸವಿರಾಜ್ ಆನಂದೂರು ಮಾತನಾಡಿ, ಕಾದಂಬರಿಯು ಕೇವಲ ರೈತರ ಸಮಸ್ಯೆಗಳನ್ನಷ್ಟೇ ಅಲ್ಲದೆ ಆ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುವುದರ ಜೊತೆಗೆ ರೈತರ ಬದುಕಿನ ಸೌಂದರ್ಯವನ್ನು ತೆರೆದಿಟ್ಟಿದೆ. ಕುವೆಂಪು, ಭೈರಪ್ಪ ಅಥವಾ ಯಾವುದೇ ಸಾಹಿತಿಗಳ ಕಾದಂಬರಿಯಲ್ಲಿ ಪ್ರೇಮದ ಒರತೆ ಇಲ್ಲದಿದ್ದಲ್ಲಿ ಅದು ಕೇವಲ ಅಂಕಿ ಅಂಶದ ದಾಖಲೀಕರಣವೋ ಅಥವಾ ಮಾಹಿತಿ ಸಂಗ್ರಹವೋ ಆಗಿರುತ್ತಿತ್ತು. ಪಾತ್ರಗಳು ಎದೆಯಾಳದಲ್ಲಿ ಇಳಿದು ಕಾಡಬೇಕೆಂದರೆ ಅದರಲ್ಲಿ ಪ್ರೇಮದ ಸತ್ವ ಬಹು ಮುಖ್ಯವಾದದ್ದು. ಕಾದಂಬರಿಯ ಮುಖ್ಯ ಪಾತ್ರಗಳಾದ ’ವೀರ್’ ಮತ್ತು ಮ’ ನಡುವಿನ ವಿಶೇಷ ಪ್ರೇಮವೇ ಓದುಗನನ್ನು ಓದುವಂತೆ ಮಾಡಿದೆ. ಬಿಡುಗಡೆಯಾದ ಏಳು ತಿಂಗಳಲ್ಲಿಯೇ ಎರಡನೇ ಮುದ್ರಣ ಕಾಣುತ್ತಿರುವ ಕಾದಂಬರಿ ಇನ್ನೂ ಹೆಚ್ಚಿನ ಮುದ್ರಣಗಳನ್ನು ಕಾಣಲಿ, ಲೇಖಕಿಯ ಆಶಯದಂತೆ ಯುವರೈತರ ಕೈ ಸೇರಲಿ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಮಮತಾ ರಾವ್ ಮಾತನಾಡಿ, ಬುಕ್ ಮಾತು ಕಾರ್ಯಕ್ರಮ ಚೆನ್ನಾಗಿದ್ದು, ತಮ್ಮ ಸಂಸ್ಥೆಯ ಗುರಿ ಗ್ರಾಮಗಳ ಅಭಿವೃದ್ಧಿಯೇ ಆಗಿದ್ದು ಕಾದಂಬರಿ ರೈತರ ಕುರಿತಾಗಿರುವುದರಿಂದ ತಮ್ಮ ಗ್ರಂಥಾಲಯಗಳ ಮೂಲಕ ಕಾದಂಬರಿಯನ್ನು ಯುವರೈತರ ಕೈ ತಲುಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಶನ್ ರವರಿಂದ ಪ್ರಕಾಶನಗೊಂಡ ಮಮತಾ ಪ್ರಭು ರವರ ದರಗುಟ್ಟಿ ಮಳೆ ಸುರಿದು ಕಾದಂಬರಿಯ ಎರಡನೇ ಮುದ್ರಣದ ಬಿಡುಗಡೆ, ಸಂವಾದ ಹಾಗೂ ವಿಮರ್ಶೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ರೈತ ಪ್ರಶಸ್ತಿ ವಿಜೇತ ಶ್ರೀರಾಮ್, ಹಸಿರು ಭೂಮಿ ಪ್ರತಿಷ್ಠಾನ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ, ರಾಷ್ಟ್ರಪ್ರಶಸ್ತಿ ಪ್ರಶಸ್ತಿ ವಿಜೇತ ಚ.ನ. ಅಶೋಕ್, ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶ ಸುರೇಂದ್ರ, ಹಾಸನ ತಾಲ್ಲೂಕು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಪರಿಸರ ಸ್ನೇಹಿ ಕ್ಲಿಯರಿನ್ ಸಂಸ್ಥೆಯ ಸ್ಥಾಪಕ ಚಂದ್ರಶೇಖರ್ ಹಾಗೂ ಉಮಾ ಸುನೀಲ್, ಮಮತಾ ಪ್ರಭು ಹಾಗೂ ಇತರರು ಹಾಜರಿದ್ದರು.