ಜಿಲ್ಲೆ

ಪುಸ್ತಕ ಓದುವ ಅವಶ್ಯಕತೆ ಸಾಕಷ್ಟಿದೆ

ಮೈಸೂರು: ಕೃತಕ ಬುದ್ಧಿಮತ್ತೆಯ ಯುಗದಲ್ಲೂ ಪುಸ್ತಕಗಳನ್ನು ಓದುವ ಅವಶ್ಯಕತೆ ಸಾಕಷ್ಟು ಇದೆ ಎಂದು ಎಸ್‌ಡಿಎಂ ಐಎಂಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಂ.ವಿ. ಸುನೀಲ್ ಹೇಳಿದರು.

ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನದ ಅಂಗವಾಗಿ ಸರಸ್ವತಿಪುರಂನ ಜೆಎಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕಗಳು ಮಾತನಾಡುತ್ತವೆ. ಪುಸ್ತಕಗಳನ್ನು ಓದುವಾಗ ಒಂದು ಶಿಸ್ತನ್ನು ಬಳಸಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗದೆ ಇಷ್ಟಪಟ್ಟು ಪುಸ್ತಕ ಓದಬೇಕು ಎಂದರು

ಮಾಹಿತಿ ಯುಗದಲ್ಲಿ ಮಾಹಿತಿಗಳು ನಮಗೆ ಎಲ್ಲ ಕಡೆ ಸಿಗುತ್ತವೆ. ಆದರೆ, ಯಾವ ಮಾಹಿತಿ ಸರಿ, ಯಾವುದು ತಪ್ಪು ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು ಎಂಬ ತೀರ್ಮಾನ ನಮ್ಮದೇ ಆಗಿರುತ್ತದೆ. ಓದಿದ್ದನ್ನು ನಮ್ಮ ಬೆಳವಣಿಗೆಗೆ ಬಳಸಿಕೊಳ್ಳುವ ರೀತಿಯನ್ನು ನಾವು ಕರಗತ ಮಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ರೇಚಣ್ಣ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದ ಬಳಕೆಯನ್ನು ತಮ್ಮ ಓದಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದರು. ಗ್ರಂಥಪಾಲಕ ಎಚ್.ಎನ್. ಮಂಜುನಾಥ್, ಎಚ್.ಎಸ್. ಪೂರ್ಣಿಮಾ, ಎಸ್.ಎಸ್.ಗಿರೀಶ್ ಭಾಗವಹಿಸಿದ್ದರು.