ಜಿಲ್ಲೆ

ಪುಷ್ಪಗಿರಿ ತಪ್ಪಲಿನ ಪುರಾತನ ಗ್ರಾಮ ಕೊತ್ತನಳ್ಳಿ

ಹಿರಿಕರ ರವಿ ಸೋಮವಾರಪೇಟೆ

ಪುಷ್ಪಗಿರಿ ತಪ್ಪಲಿನಲ್ಲಿರುವ ಪುರಾತನ ಗ್ರಾಮ ಕೊತ್ತನಳ್ಳಿ ಇಂದು ಅಭಿವೃದ್ಧಿ ಹೊಂದುತ್ತಿರುವ ಮಾದರಿ ಗ್ರಾಮವೆಂದು ಕರೆಸಿಕೊಂಡಿದೆ.

ರೈತರು ಕೃಷಿ ಭೂಮಿಯಲ್ಲಿ ದುಡಿದು, ಆರ್ಥಿಕವಾಗಿ ಸಬಲರಾಗಿದ್ದಾರೆ. ಇವತ್ತಿಗೂ ಪ್ರತಿ ಕುಟುಂಬದವರು ಕೃಷಿ ಭೂಮಿಯಲ್ಲಿ ದುಡಿಯುತ್ತಾರೆ. ಕಾಫಿ, ಕಾಳುಮೆಣಸು, ಭತ್ತ, ಅಡಕೆ ಕೃಷಿ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಕೆಲವರು ನಗರ ಪ್ರದೇಶದಲ್ಲಿ ನೌಕರಿ ಮಾಡುತ್ತಿದ್ದಾರೆ.

ಬೆಂಕ್ಕಳ್ಳಿ, ಬೀಕಳ್ಳಿ, ತಡ್ಡಿಕೊಪ್ಪ, ನಾಡ್ನಳ್ಳಿ ಉಪಗ್ರಾಮಗಳು ಸೇರಿ ಕೊತ್ತನಳ್ಳಿ ಗ್ರಾಮವಾಗಿದೆ. 150 ಕುಟುಂಬಗಳು ವಾಸವಾಗಿದೆ. 600 ರಷ್ಟು ಜನಸಂಖ್ಯೆಯಿದೆ. ಎಲ್ಲ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದಾರೆ.

ಸುಮಾರು 900 ವರ್ಷಗಳ ಇತಿಹಾಸ ಗ್ರಾಮಕ್ಕಿದೆ. ಪುರಾತನ ಗ್ರಾಮವೆಂಬುದಕ್ಕೆ ಕುರುಹುಗಳು ಕಾಣ ಸಿಕ್ಕರೂ, ಪುರಾತತ್ವ ಇಲಾಖೆಯವರು ಸಂಶೋಧನೆ ಮಾಡಿಲ್ಲ. ಉತ್ಕನನ ನಡೆದಿಲ್ಲ ಎಂದು ಹಿರಿಯರು ಹೇಳಿದರು. ಅರಣ್ಯದ ಮಧ್ಯೆ ಕೋಟೆಗಳ ಅವಶೇಷಗಳು ಕಾಣಸಿಕ್ಕಿವೆ. ವೀರಗಲ್ಲುಗಳಿಗೆ. ಅಂತಹ ಕಲ್ಲುಗಳನ್ನು ಅಜ್ಜಯ್ಯ ದೇವರು ಎಂದು ಪೂಜೆ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ಕೃಷಿ ರೈತರ ಕೈಹಿಡಿದಿದೆ. 50 ವರ್ಷಗಳ ಹಿಂದೆ ಅತಿ ಹೆಚ್ಚು ಏಲಕ್ಕಿಯನ್ನು ಗ್ರಾಮದಲ್ಲಿ ಬೆಳೆಯಲಾಗುತ್ತಿತ್ತು. ಮೂರು ದಶಕಗಳ ಹಿಂದೆ ಏಲಕ್ಕಿ ಕೃಷಿಗೆ ಕಟ್ಟೆರೋಗ ವ್ಯಾಪಿಸಿ, ಔಷಧಿಯಿಲ್ಲದೆ ಕೊಡಗಿನಲ್ಲಿ ಶೇ.90ರಷ್ಟು ಏಲಕ್ಕಿ ನಾಶವಾಯಿತು. ಆದರೆ ಕೊತ್ತನಳ್ಳಿ ಗ್ರಾಮದಲ್ಲಿ ಈಗಲೂ ಏಲಕ್ಕಿಯನ್ನು ಬೆಳೆಯುತ್ತಿದ್ದಾರೆ. ಗ್ವಾಟೆಮಾಲ ಹಾಗು ಕೇರಳ ಮೂಲದ ನೆಲ್ಯಾಣಿ ತಳಿಗಳ ಏಲಕ್ಕಿಯನ್ನು ರೈತರು ಬೆಳೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯವನ್ನು ಅಪೇಕ್ಷೆ ಮಾಡದೆ ಏಲಕ್ಕಿ ಮತ್ತು ಭತ್ತ ಕೃಷಿಯನ್ನು ರೈತರು ಮುಂದುವರಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರತಿ ಕುಟುಂಬ ಊಟ ಮಾಡಲು ಭತ್ತ, ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ.

ಕಾಡುಪ್ರಾಣಿಗಳ ಹಾವಳಿ: ಪುಷ್ಪಗಿರಿ ಅರಣ್ಯದ ಸನಿಹವಾಗಿರುವ ಗ್ರಾಮದಲ್ಲಿ ವನ್ಯಪ್ರಾಣಿಗಳಿಂದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ. ಭತ್ತ ಪೈರುಗಳನ್ನು ಕಾಡುಕೋಣಗಳು, ಕಾಡುಹಂದಿ ನಾಶ ಮಾಡುತ್ತವೆ. ನವಿಲು ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ ಹಾವಳಿಯಿದೆ. ಭತ್ತ ಬೆಳೆ ಹಣ್ಣಾದಂತೆ ಫಸಲನ್ನು ರಕ್ಷಿಸಿಕೊಳ್ಳಲು ಕೃಷಿಕರ ಗದ್ದೆಯಲ್ಲೇ ರಾತ್ರಿ ಪಹರೆ ಕಾಯ್ದು ಫಸಲನ್ನು ಉಳಿಸಿಕೊಳ್ಳುತ್ತಾರೆ.

ಆಸ್ತಿಯಿದ್ದರೂ ಅನಾಥ ಭಾವ: ಆಸ್ತಿ ದಾಖಲಾಯಿತಿಗಳ ಸಮಸ್ಯೆಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ನಿರ್ಲಕ್ಷೃದಿಂದ ಸೆಟಲ್‌ಮೆಂಟ್ ಸರ್ವೇ ಇದುವರೆಗೂ ಆಗಿಲ್ಲ. ಆಸ್ತಿಯ ಹದ್ದುಬಸ್ತು ಗುರುತಿಸಿಲ್ಲ. ಸರಿಯಾದ ನಕಾಶೆ ಇಲ್ಲ. ಕೃಷಿ ಭೂಮಿ ದುರಸ್ತಿಯಾಗಿಲ್ಲ. ಕೃಷಿಕರ ಸ್ವಾಧೀನದಲ್ಲಿರುವ ಜಾಗ ಮತ್ತು ಕಡತದಲ್ಲಿರುವ ಜಾಗಕ್ಕೂ ವ್ಯತ್ಯಾಸವಿದೆ. ಸಿ ಆ್ಯಂಡ್ ಡಿ ಜಾಗದ ಭೂತವೂ ಕೃಷಿಕರನ್ನು ಕಾಡುತ್ತಿದೆ. ಪುಷ್ಪಗಿರಿ ವನ್ಯಧಾಮದ ಪಕ್ಕವಿರುವ ಕಾರಣ, ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಕೃಷಿ ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಆತಂಕ ಕೊತ್ತನಳ್ಳಿ ಗ್ರಾಮದ ಕೃಷಿಕರಲ್ಲಿದೆ.

ಧಾರ್ಮಿಕ ಕತೆಯಲ್ಲೂ ಮುಂದು: ಕಳೆದ 100 ವರ್ಷಗಳಿಂದ ಕಾಳಿಕಾಂಬೆಯನ್ನು ಗ್ರಾಮಸ್ಥರು ಗ್ರಾಮದೇವತೆಯಾಗಿ ಪೂಜಿಸುತ್ತಾರೆ. ಕಾರ್ತಿಕ ಮಾಸದ ಪೂಜೆ, ಯುಗಾದಿ ಪೂಜೆ ನೆರವೇರಿಸುತ್ತಾರೆ. ಹೊಟ್ನಳ್ಳಿ ಚೌಡಿಯನ್ನು ಪೂಜಿಸುತ್ತಾರೆ. ಬೀರದೇವರ ಗುಡಿ, ವೀರಭದ್ರ ದೇವಸ್ಥಾನ ಗ್ರಾಮದಲ್ಲಿದೆ.

ಸುಮಾರು 800 ವರ್ಷಗಳ ಇತಿಹಾಸವಿರುವ ಸುಗ್ಗಿಕಟ್ಟೆ ಕೊತ್ನಳ್ಳಿ ಗ್ರಾಮದಲ್ಲಿದೆ. ಇವತ್ತಿಗೂ ಸುಗ್ಗಿ ಬನದಲ್ಲಿ ಪೂಜೆ ಸಲ್ಲಿಸಿದ ನಂತರ ಸುಗ್ಗಿಯ ಕಟ್ಟುಪಾಡುಗಳು ಪ್ರಾರಂಭವಾಗುತ್ತದೆ.

15 ದಿನ ಕಟ್ಟುನಿಟ್ಟು: ಏಪ್ರಿಲ್ 19ರಿಂದ ಕೊತ್ನಳ್ಳಿ ಗ್ರಾಮದಲ್ಲಿ ಸುಗ್ಗಿ ಉತ್ಸವ ಪ್ರಾರಂಭವಾಗುತ್ತದೆ. ಸುಗ್ಗಿ ಸಾರು(ಕಟ್ಟುನಿಟ್ಟಿನ ಅಚರಣೆಯ ಪದ) ಪ್ರಾರಂಭವಾದಂತೆ 15ದಿನಗಳ ಕಾಲ ಗ್ರಾಮದಲ್ಲಿ ಕಟ್ಟುನಿಟ್ಟಿನ ಪೂಜಾ ಕಾರ್ಯಗಳೊಂದಿಗೆ ಸುಗ್ಗಿ ಆಚರಿಸುತ್ತಾರೆ. ‘ಸುಗ್ಗಿ ಸಾರು‘ ಪ್ರಾರಂಭವಾದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಹಸಿ ಕಡಿಯಬಾರದು ಒಣಗು ಮುರಿಯಬಾರದು ಎಂಬ ಕಟ್ಟುಪಾಡಿನಂತೆ ಹಸಿ ಮರಗಳನ್ನು ಕಡಿಯುವುದಿಲ್ಲ. ಒಣಗಿದ ಕಡ್ಡಿಗಳನ್ನು ಮುರಿಯುವುದಿಲ್ಲ.

ಮನೆಯಲ್ಲಿ ಹೆಂಚಿನಲ್ಲಿ ರೊಟ್ಟಿ ಸುಡುವಂತಿಲ್ಲ. ಸೂರ‌್ಯ ಉದಯಿಸಿ, ಸಂಜೆ ನಕ್ಷತ್ರಗಳು ಕಾಣುವ ತನಕ ಈ ನಿಯಮ ಚಾಲ್ತಿಯಲ್ಲಿರುತ್ತದೆ. ಊರಿನ ಹೊರಗೆ ಯಾವುದೇ ವಸ್ತುಗಳು ಸೇರಿದಂತೆ ದಿನಸಿಯನ್ನು ಖರೀದಿಸುವಂತಿಲ್ಲ. ಮನೆಯವರು ಬೇರೆಯವರನ್ನು ಮುಟ್ಟುವಂತಿಲ್ಲ. ಅತಿಥಿಗಳು ಮನೆಗೆ ಬಂದರೆ, ಮನೆ ಪ್ರವೇಶ ನಿಷಿದ್ಧ, ನಕ್ಷತ್ರ ಕಂಡ ನಂತರ ಮಾಮೂಲಿ ಆತಿಥ್ಯ. ಈ ಕಟ್ಟುಪಾಡುಗಳನ್ನು ಮೀರಿ ನಡೆದರೆ ಊರು ದೇವತೆಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಎಲ್ಲರನ್ನೂ ಕಾಡುತ್ತದೆ.

ನಗರಳ್ಳಿ ಗ್ರಾಮದಲ್ಲಿ ನಡೆಯುವ 19 ಗ್ರಾಮಗಳ ಕೂತಿನಾಡು ಸುಗ್ಗಿ ಪ್ರಾರಂಭವಾಗುವುದು ಕೊತ್ತನಳ್ಳಿ ಗ್ರಾಮಸ್ಥರು ಬೆತ್ತದ ಹಗ್ಗ, ಬಿಲ್ಲು, ಪಟ್ಟ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರವೇ ಎಂಬುದು ವಿಶೇಷವಾಗಿದೆ.

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಜಾತ್ರೋತ್ಸವದಲ್ಲಿ ಅರಸಬಲ ಸೇವೆ ಎಂಬ ವಿಶೇಷ ಪೂಜೆ ಪ್ರಾರಂಭವಾಗುವುದು ಕೊತ್ನಳ್ಳಿ ಗ್ರಾಮಸ್ಥರು ಬರಗಾಲಲ್ಲಿ ಪುಷ್ಪಗಿರಿ ಬೆಟ್ಟ ಏರಿ, ತುತ್ತತುದಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ಗುಡಿಯಲ್ಲಿ ಪೂಜೆ ಸಲ್ಲಿಸಿ, ನಂತರ ಬೆಟ್ಟ ಇಳಿದು ಬಿಳಿ ಕುಪ್ಪಸ ದಟ್ಟಿ ಧರಿಸಿ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ವಿಧ್ಯುಕ್ತವಾಗಿ ಜಾತ್ರೋತ್ಸವ ಪ್ರಾರಂಭವಾಗುತ್ತದೆ. ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದು ಬರುತ್ತಿದ್ದು, ಈ ಕಾರಣದಿಂದಲೇ ಕೊತ್ನಳ್ಳಿಗೆ ಧಾರ್ಮಿಕ ಹಿನ್ನೆಲೆಯುಳ್ಳ ಪುರಾತನ ಗ್ರಾಮವೆಂದು ಕರೆಯಲಾಗುತ್ತಿದೆ ಎಂದು ಹಿರಿಯರು ಹೇಳಿದರು.

ಹಿಂದೆ ಕುಗ್ರಾಮವಾಗಿದ್ದರು ಈಗ ಕೊತ್ತನಳ್ಳಿ ಮಾದರಿ ಗ್ರಾಮವಾಗಿದೆ. ಗ್ರಾಮಸ್ಥರನ್ನು ಸುತ್ತಮುತ್ತಲ ಗ್ರಾಮಗಳ ಜನರು ಗೌರವಿಸುತ್ತಾರೆ. ಧಾರ್ಮಿಕ ಆಚರಣೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಉಪಗ್ರಾಮಗಳನ್ನು ಸೇರಿಸಿಕೊಂಡೆ ಕೊತ್ತನಳ್ಳಿ ಗ್ರಾಮದಲ್ಲಿ ಸಭೆಗಳು ನಡೆಯುತ್ತವೆ. ಗ್ರಾಮಸ್ಥರ ಬಹುತೇಕ ವ್ಯಾಜ್ಯಗಳನ್ನು ಗ್ರಾಮಸಭೆಗಳಲ್ಲೇ ತೀರ್ಮಾನ ಮಾಡಿ ಸೂಕ್ತ ನ್ಯಾಯವನ್ನು ಕೊಡಲಾಗುತ್ತದೆ. ಕೃಷಿ ಚಟುವಟಿಕೆಯನ್ನು ಕುಟುಂಬಗಳು ಕೂಡಿಕೊಂಡು ಮಾಡುತ್ತಾರೆ. ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ.

ರಸ್ತೆ ಕೂಗು ಅರಣ್ಯರೋದನ: ಒಂದು ಕಡೆ ಅಭಿವೃದ್ಧಿ ಮಾದರಿ ಗ್ರಾಮವಾದರೂ, ತಡ್ಡೊಕೊಪ್ಪ ಮತ್ತು ನಾಡ್ನಳ್ಳಿ ಊರಿಗೆ ಡಾಂಬರು ರಸ್ತೆಯಾಗಿಲ್ಲ. ಮಳೆಕಾಲದಲ್ಲಿ ರಸ್ತೆಯಲ್ಲಿ ಜೀಪುಗಳು ಹೋಗಲು ಸಾಧ್ಯವಿಲ್ಲ. ಗ್ರಾಮದ ಮಧ್ಯದಲ್ಲಿ ಕುಮಾರಧಾರ ನದಿ ಹರಿದು ಮಳೆಗಾಲದಲ್ಲಿ ಭೋರ್ಗೆರೆಯುತ್ತದೆ. ಮಳೆಗಾಲದಲ್ಲಿ ಕೆಲ ದಿನ ತಡ್ಡಿಕೊಪ್ಪ ಗ್ರಾಮಸ್ಥರು ನಗರ ಪ್ರದೇಶದ ಸಂಪರ್ಕವನ್ನು ಕಳೆದು ಕೊಳ್ಳುತ್ತಾರೆ. ನಾಡ್ನಳ್ಳಿ ಗ್ರಾಮಸ್ಥರು ನದಿಗೆ ಬಿದಿರಿನ ತೂಗು ಸೇತುವೆಯನ್ನು ನಿರ್ಮಿಸಿಕೊಂಡು ರಸ್ತೆಗೆ ಬರುತ್ತಾರೆ. ಇನ್ನಾದರೂ ರಸ್ತೆಯನ್ನು ಡಾಂಬರೀಕರಣಗೊಳಿಸಿಕೊಡಬೇಕು. ವಾಹನ ಸಂಚರಿಸಲು ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.