ಜಿಲ್ಲೆ

ಪುಷ್ಪಗಿರಿ ಉತ್ಸವದಲ್ಲಿ ನೀರು, ಊಟಕ್ಕಾಗಿ ಪರದಾಡಿದ ಕಲಾವಿದರು

ಹಳೇಬೀಡು: ಜನವರಿ ೪ ಮತ್ತು ೫ರಂದು ಹಳೆಬೀಡು ಸಮೀಪದ ಪುಷ್ಪಗಿರಿ ಬೆಟ್ಟದಲ್ಲಿ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ನೀರು ಮತ್ತು ಊಟ ದೊರಯದೆ ಪರಿತಪಿಸಿದ್ದಾರೆ.

ಪುಷ್ಪಗಿರಿ ಉತ್ಸವದ ಉದ್ಘಾಟನೆ ದಿನದಂದು ಬಿಸಿಲಲ್ಲಿ ಬಸವಳಿದು ಭಾಷಣ ಕೇಳಿದ್ದ ಜನತೆ ನೆರಳಿನ ವ್ಯವಸ್ಥೆ ಮಾಡದಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು . ಸಂಗೀತ ನೃತ್ಯ ಪ್ರದರ್ಶಿಸಲು ಜ. ೪ ರಂದು ಬೆಳಗ್ಗೆಯೆ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ರಾತ್ರಿಯವರೆಗೂ ಊಟ, ನೀರು ದೊರಕದೆ ಪರದಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ಬಯಲು ರಂಗಮಂದಿರದಲ್ಲಿ ತಂಗಿದ್ದ ಕಲಾವಿದರಿಗೆ ಮಾಹಿತಿ ನೀಡುವವರು ಯಾರೂ ಇಲ್ಲದಿದ್ದ ಕಾರಣ ಸಮಸ್ಯೆಯಾಗಿದೆ.

ಅಂದು ಬೆಳಗ್ಗೆಯೆ ಆಗಮಿಸಿದ್ದ ಖ್ಯಾತ ಕಲಾವಿದ , ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಮತ್ತು ತಂಡಕ್ಕೆ ಅವ್ಯವಸ್ಥೆಯ ಬಿಸಿ ಮೊದಲು ತಟ್ಟಿದೆ. ಬಳಿಕ ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ನಾಟ್ಯಾಂತರಂಗ ಸಂಸ್ಥೆಯ ಕಲಾವಿದರಿಗೂ ಸಮಸ್ಯೆ ಕಾಡಿದೆ. ಮಠದಲ್ಲಿ ಊಟದ ವ್ಯವಸ್ಥೆ ಇತ್ತಾದರೂ ಅದನ್ನು ತಿಳಿಸಲು ಯಾರೂ ಇಲ್ಲದೆ ಹೋದದ್ದು ಪರದಾಟಕ್ಕೆ ಕಾರಣ ಎನ್ನಲಾಗಿದೆ.