ಜಿಲ್ಲೆ

ಪುಷ್ಪ ಹರಾಜು ಕೇಂದ್ರದಲ್ಲಿ ಕಿಡಿಗೇಡಿಗಳ ಹಾವಳಿ- ರೈತರಿಂದ ದಿಢೀರ್ ಪ್ರತಿಭಟನೆ

ದಾವಣಗೆರೆ: ತೋಟಗಾರಿಕೆ ಇಲಾಖೆ ವ್ಯಾಪ್ತಿಯ, ಭಾರತ್ ಕಾಲನಿಯ ಪುಷ್ಪ ಹರಾಜು ಕೇಂದ್ರದಲ್ಲಿ ಹೂವು ಮಾರಾಟಗಾರರ ಮೇಲೆ ಕಿಡಿಗೇಡಿಗಳು ದಾಂಧಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು, ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ನಮಗೆ ರಕ್ಷಣೆ ನೀಡಬೇಕು. ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂದು ಪಟ್ಟು ಹಿಡಿದ ರೈತರು ಕೆಎಸ್‌ಆರ್‌ಟಿಸಿ ಎದುರಿನ ಪಿ ಬಿ ರಸ್ತೆಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಬೆಳೆಗಾರರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಗಿಳಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸಿದರೂ ಸಫಲರಾಗಲಿಲ್ಲ. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು.

ರಾತ್ರಿ ವೇಳೆ ರೈತರು ಹೂವನ್ನು ಮಾರುಕಟ್ಟೆಗೆ ತೆಂದಾಗ ಕೆಲವು ಗೂಂಡಾಗಳು ರೈತರಿಗೆ ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಮೊಬೈಲ್ ಕಸಿದುಕೊಳ್ಳುತ್ತಾರೆ. ಗೂಂಡಾಗಳನ್ನು ಬಂಧಿಸಬೇಕು ಎಂದು ಲೋಕಿಕೆರೆ ನಾಗರಾಜ್ ಆಗ್ರಹಿಸಿದರು.

ರೈತ ಭವನ ಎದುರಿದ್ದ ಹೂವಿನ ಮಾರುಕಟ್ಟೆಯನ್ನು ರೈತರ ವಿರೋಧದ ನಡುವೆಯೂ ಹಿಂದಿನ ಜಿಲ್ಲಾಧಿಕಾರಿ ಸ್ಥಳಾಂತರಿಸಿದ್ದರು. ಪೊಲೀಸ್ ಚೌಕಿ, ಎಟಿಎಂ ಆರಂಭ, ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸುವ ಭರವಸೆಯೂ ಈಡೇರಲಿಲ್ಲ. ಪುಷ್ಪ ಹರಾಜು ಕೇಂದ್ರಕ್ಕೆ ಬಸ್ ಸೌಲಭ್ಯವಿಲ್ಲದೇ ತೊಂದರೆಯಾಗಿದೆ ಎಂದು ಆರೋಪಿಸಿದರು.

ನಗರ ಡಿವೈಎಸ್ಪಿ ಡಿ. ಮಲ್ಲೇಶ್, ಸಿಪಿಐ ಕೆ.ಎನ್. ಗಜೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಗೂಂಡಾಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ತೆರವಾಯಿತಯು. ಹೂವು ಬೆಳೆಗಾರರಾದ ತಿಮ್ಮಪ್ಪ, ರಮೇಶ್, ರಂಗಪ್ಪ, ಪರಸಪ್ಪ, ಗೋಣೆಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* ಇಬ್ಬರ ವಿಚಾರಣೆ

ಹೂವು ಮಾರಾಟಗಾರರಿಗೆ ಬೆದರಿಕೆಯೊಡ್ಡಿದ ಪ್ರಕರಣ ಸಂಬಂಧ ಎಚ್‌ಕೆಆರ್ ನಗರದ ಲಕ್ಷ್ಮಣ್ ಹಾಗೂ ಖಾರದಪುಡಿ ಚಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.