ವಿರಾಜಪೇಟೆ: ಮಹಿಳೆ ಕಲಿತರೆ ಕುಟಂಬವೇ ಕಲಿತಂತೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಶೈಕ್ಷಣಿಕವಾಗಿ ಮುಂದುವರಿದಿದ್ದು, ಪುರುಷರಷ್ಟೇ ಸರಿಸಮಾನಳಾಗಿ ಎಲ್ಲ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾಳೆ ಎಂದು ವಿರಾಜಪೇಟೆ ಮಹಿಳಾ ಸಮಾಜದ ಅಧಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ಮಹಿಳಾ ಸದಸ್ಯರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಎಲೆಮರೆ ಕಾಯಿಯಂತಿರುವ ಮಹಿಳಾ ಪ್ರತಿಭವಂತರು ಮನೆಯಲ್ಲಿಯೇ ಕಾಲ ಕಳೆಯದೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು. ಮುಂದಿನ ವರ್ಷ ಮಹಿಳಾ ದಿನಾಚರಣೆಗೆ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.
ಈ ಹಿಂದೆ ಮಹಿಳಾ ಸಮಾಜದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರಾದ ನಾಟೋಳಂಡ ಆಶಾ ಚಿಣ್ಣಪ್ಪ ಮತ್ತು ಮುಂಡ್ಯೋಳಂಡ ಕುಸುಮ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಯು.ಕೆ.ಪೊನ್ನಮ್ಮ, ಕಾರ್ಯದರ್ಶಿ ಬಿ.ಜಿ.ಪುಷ್ಪಲತಾ, ನಿರ್ದೇಶಕರಾದ ಬಿ.ಆರ್.ಸಬೀತ, ಮೆಟಿಲ್ಡಾ ಲೋಬೊ, ಬಿ.ಎನ್.ಭಾರತಿ, ಪಿ.ಕೆ.ನಿಲಮ್ಮ, ಎಚ್.ಆರ್.ಪುಷ್ಪಾ ವಾಸು, ಪ್ರೇಮಾ ಮಂಜುನಾಥ್, ಬಿ.ಯಶೋದಾ ಬಾಬು, ಪುಷ್ಪಾ ಐತಪ್ಪ ಇತರರಿದ್ದರು.