ಹೂವಿನಹಡಗಲಿ: ಭಗವಂತನ ಒಲುಮೆಗೆ ನಿರ್ಮಲ ಭಕ್ತಿ ಬೇಕು ಹಾಗೂ ಸಂತಸದ ಬದುಕಿಗೆ ಗುರುವಿನ ಮಾರ್ಗದರ್ಶನ ಬೇಕು ಎಂದು ಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಹಿರೇಕೊಳಚಿ ಗ್ರಾಮದಲ್ಲಿ ಗವಿಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲಿಯುಗದಲ್ಲಿ ದೇವರ ನಾಮಸ್ಮರಣೆಗೆ ಮಹತ್ವ ಕಲ್ಪಿಸಲಾಗಿದೆ. ಪುರಾಣದಿಂದ ಪರಮಾತ್ಮನ ನೇರ ಸಾಕ್ಷಾತ್ಕಾರ ದೊರಕುತ್ತದೆ. ನಿತ್ಯ ಪರಮಾತ್ಮನ ನಾಮ ಸ್ಮರಣೆ ಮಾಡಬೇಕು ಎಂದರು.
ಶರಣರು ಈ ನಾಡಿನಲ್ಲಿ ಅಕ್ಷರ ಮತ್ತು ಅನ್ನದಾಸೋಹದ ಪರಿಕಲ್ಪನೆಯನ್ನು ಬಿತ್ತಿದ್ದಾರೆ. ಪುರಾಣಗಳನ್ನು ಆಲಿಸುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ. ಶರಣಬಸವೇಶ್ವರರು ಈ ನಾಡು ಕಂಡ ಅಪರೂಪದ ಮಹಾಂತರು. ಎಲ್ಲರಂತೆ ಅವರು ಕೂಡ ದೇವರ ನೆಲೆಯನ್ನು ಕಂಡುಕೊಂಡು ಭಕ್ತರಲ್ಲಿ ದೇವರ ಬಗ್ಗೆ ತಿಳಿಸಿದರು ಎಂದು ಡಾ.ಹಿರಿಶಾಂತವೀರ ಸ್ವಾಮೀಜಿ ತಿಳಿಸಿದರು.
ಪುರಾಣ ಪ್ರವಚಕ ವಿರೂಪಾಕ್ಷ ಶಾಸ್ತ್ರಿ, ಕಲಾವಿದರಾದ ಸಿದ್ಧಲಿಂಗಸ್ವಾಮಿ ಹಿರೇಮಠ, ಬಾಲಾಜಿ ಕಟ್ಟಿ, ಗ್ರಾಮಸ್ಥರಾದ ಮಂಜುನಾಥಯ್ಯ, ನಾಗಪ್ಪ, ಕೊಟ್ರಬಸಪ್ಪ, ಸಂಗನಗೌಡ ಇತರರಿದ್ದರು.