ಜಿಲ್ಲೆ

ಪುರಸಭೆಯಿಂದಲೇ ಮಲತ್ಯಾಜ್ಯ ಸಂಸ್ಕರಣಾ ಘಟಕ

  • ವಿರಾಜಪೇಟೆ: ವೈಜ್ಞಾನಿಕವಾಗಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಪುರಸಭೆ ಅಧೀನದಲ್ಲಿರುವ ಅರ್ಧ ಎಕರೆ ಜಾಗ ನೀಡಬೇಕು ಎಂಬ ತಾಲೂಕು ಪಂಚಾಯಿತಿ ಅರ್ಜಿಯನ್ನು ತಿರಸ್ಕರಿಸಲಾಯಿತು. ಪುರಸಭೆಯಿಂದಲೇ ಘಟಕ ನಿರ್ಮಿಸುವ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ವಿಷೇಶ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.

  • ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯ ಆರಂಭದಲ್ಲಿ ಈ ವಿಷಯ ಮುನ್ನೆಲೆಗೆ ಬಂತು. ಪೆರಂಬಾಡಿಯ ಘನತ್ಯಾಜ್ಯ ಘಟಕದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅರ್ಧ ಎಕರೆ ಜಾಗವನ್ನು ನೀಡಿದರೆ 3.5 ಕೋಟಿ ರೂ. ವೆಚ್ಚದ ಯಂತ್ರೋಪಕರಣ ಬಳಸಿ ವೈಜ್ಞಾನಿಕ ರೀತಿಯಲ್ಲಿ ಘಟಕ ನಿರ್ಮಾಣ ಮಾಡಬಹುದೆಂದು ಅಧ್ಯಕ್ಷರು ವಿಷಯ ಪ್ರಸ್ತಾಪಿಸಿದರು. ಬಳಿಕ ಸಿ.ಕೆ ಪೃಥ್ವಿನಾಥ್ ಮಾತನಾಡಿ, 1996ರಲ್ಲಿ ಸರ್ಕಾರ ಘನತ್ಯಾಜ್ಯ ಘಟಕಕ್ಕೆ 5 ಎಕರೆ ಜಾಗ ನೀಡಿದೆ. ಆ ಸಂದರ್ಭದಲ್ಲಿ ಪಟ್ಟಣದ ಜನಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಹೆಚ್ಚಿದ್ದು ಜಾಗ ಸಾಕಾಗುವುದಿಲ್ಲ. ಘನತ್ಯಾಜ್ಯ ಘಟಕದ ಸಮೀಪ 16 ಎಕರೆ ಪೈಸಾರಿ ಜಾಗವಿದೆ. ಅದರಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಂಡು ಸಂಸ್ಕರಣಾ ಘಟಕವನ್ನು ಪುರಸಭೆಯಿಂದಲೇ ನಿರ್ಮಿಸಬಹುದು ಎಂದರು.
    ಮಹಮದ್ ರಾಫೀ ಮಾತನಾಡಿ, ತಾಲೂಕು ಪಂಚಾಯಿತಿ ನಿರ್ಧಾರ ಸರಿಯಲ್ಲ. ಬೇರೆ ಪಂಚಾಯಿತಿಗಳು ಒಪ್ಪಿಗೆ ಸೂಚಿಸದ ಕಾರಣ ಇಲ್ಲಿಗೆ ಪತ್ರ ಬರೆದಿದ್ದಾರೆ. 39 ಪಂಚಾಯಿತಿಗಳ ಮಲತ್ಯಾಜ್ಯವನ್ನು ತಂದು ನಮ್ಮಲ್ಲಿ ಅವಾಂತರ ಮಾಡುವುದು ಬೇಡ. ಹಾಗೇನಾದರೂ ಘಟಕ ನಿರ್ಮಿಸುವುದಾದರೆ ಪುರಸಭೆಗೆ ಮಾತ್ರ ಸೀಮಿತವಾಗಿರಲಿ ಎಂದು ಸಲಹೆ ನೀಡಿದರು.

  • ದೇಚಮ್ಮ ಮಾತನಾಡಿ, ಮೊಗರಗಲ್ಲಿಯಲ್ಲಿ ಬರೆ ಕುಸಿದು ಸುಬ್ರಮಣಿ ಮಂಜುಳಾ ಎಂಬುವರ ಮನೆಗೆ ಹಾನಿಯಾಗಿದೆ. ಅಧ್ಯಕ್ಷರು ಸ್ಥಳ ಪರಿಶೀಲನೆಗೆ ಬರಲಿಲ್ಲ. ನಷ್ಟದ ಬಗ್ಗೆ ಮುಖ್ಯಾಧಿಕಾರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಬರೆ ಕುಸಿದು ಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಕಚೇರಿಯಿಂದ ವರದಿ ನೀಡಿದ್ದಾರೆ. ಮುಂದೇನು ಮಾಡುವುದು ಎಂದು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ಹೇಮಕುಮಾರ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನುದಾನದಲ್ಲಿ ಪ್ರಕೃತಿ ವಿಕೋಪದಲ್ಲಿ ಮರಣ ಹೊಂದಿದರೆ, ಮನೆ ಸಂಪೂರ್ಣ ಹಾನಿಗೊಳಗಾದರೆ ಪರಿಹಾರ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

  • ರಾಜೇಶ್ ಮಾತನಾಡಿ, ಅಯ್ಯಪ್ಪ ಬೆಟ್ಟ, ಮಲೆತೆರಿಕೆ ಬೆಟ್ಟದಲ್ಲಿನ 64 ಮನೆಗಳನ್ನು ಸ್ಥಳಾಂತರ ಮಾಡಲು ವರದಿ ನೀಡಲಾಗಿದೆ. ಪ್ರತಿ ಮಳೆಗಾಲ ಬಂತೆಂದರೆ ಅವರನ್ನು ಸ್ಥಳಾಂತರ ಮಾಡಿ ಎಂದು ಜಿಲ್ಲಾಧಿಕಾರಿ ಆದೇಶಿಸುತ್ತಾರೆ. ಅವರು ಬೆಟ್ಟದಿಂದ ಬರಲು ಒಪ್ಪುವುದಿಲ್ಲ. ನಾನೇಕೆ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ ಎಂಬುದಾಗಿದೆ. ಅವರಿಗೆ ಶಾಶ್ವತ ಸೂರು ಒದಗಿಸಿ ಕೊಡಿ ಎಂದು ಮನವಿ ಮಾಡಿದರು.
    ಇಂಜಿನಿಯರ್ ಹೇಮಕುಮಾರ್ ಉತ್ತರಿಸಿ, ಅಬ್ಬಂಟಿಯಲ್ಲಿ 7.80 ಎಕರೆ ಜಾಗ ಗುರುತು ಮಾಡಲಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಲಾಗಿದೆ. 2022ರ ಜುಲೈ 18ರಂದು ಹಣಕಾಸು ಇಲಾಖೆಯಿಂದ ಆರ್ಥಿಕ ಅನುಮೋದನೆಯೂ ದೊರೆತಿದೆ. ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಶಾಶ್ವತ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
  • ಉಪಾಧ್ಯಕ್ಷ ವಿನಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್, ಸದಸ್ಯರು ಇದ್ದರು.