ಹೊಳೆನರಸೀಪುರ: ಪಟ್ಟಣದ ಹೇಮಾವತಿ ಕ್ರೀಡಾಂಗಣದ ಸಮೀಪ ಹೇಮಾವತಿ ನದಿ ದಂಡೆಯಲ್ಲಿರುವ ರುದ್ರಭೂಮಿಯನ್ನು ಪುರಸಭೆ ವತಿಯಿಂದ ಸ್ವಚ್ಛಗೊಳಿಸಲಾಯಿತು.
ರುದ್ರಭೂಮಿ ಘನತ್ಯಾಜ್ಯ ವಸ್ತುಗಳು, ಗಿಡ ಗಂಟಿಗಳಿಂದ ಅಂತ್ಯಕ್ರಿಯ ನಡೆಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತ್ಯಕ್ರಿಯೆಗೆ ಸಾಗಿದ ಸಾರ್ವಜನಿಕರು ಸ್ಥಳಾವಕಾಶದ ಸಮಸ್ಯೆಯಿಂದ ಪರದಾಡುವಂತೆ ಆಗಿತ್ತು. ಯಥೇಚ್ಛವಾಗಿ ಬೆಳೆದ ಗಿಡ ಗಂಟಿಗಳ ನಡುವೆ ವಿಷ ಜಂತುಗಳ ಭಯದಿಂದ ಅಂತ್ಯಕ್ರಿಯೆ ನಡೆಸುವಂತಾಗಿತ್ತು. ಹಾಗಾಗಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಪುರಸಭೆ ಆಡಳಿತಕ್ಕೆ ಮನವಿ ಮಾಡಿದರು. ನಾಗರಿಕರ ಮನವಿಗೆ ಸ್ಪಂದಿಸಿದ ಪುರಸಭೆ ಅಧ್ಯಕ್ಷ ಹಾಗೂ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛತೆಗೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.