ಜಿಲ್ಲೆ

ಪುರಸಭೆಯಿಂದ 50 ಲಕ್ಷ ರೂ. ಉಳಿತಾಯ ಬಜೆಟ್

ಗುಂಡ್ಲುಪೇಟೆ: ಪಟ್ಟಣವನ್ನು ಮಾದರಿಯನ್ನಾಗಿಸುವುದು ಹಾಗೂ ಸೂರಿಲ್ಲದವರಿಗೆ ನಿವೇಶನ ನೀಡುವ ಗುರಿ ಹೊಂದಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ತಿಳಿಸಿದರು. ಮಂಗಳವಾರ ಪಟ್ಟಣ ಪುರಸಭೆಯ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿ ಅವರು ಮಾತನಾಡಿದರು.


ರಾಜಸ್ವ ಖಾತೆಯಲ್ಲಿ ಆರಂಭಿಕ ಶಿಲ್ಕು 1 ಕೋಟಿ 12 ಲಕ್ಷ 9 ಸಾವಿರದ 623 ರೂ.ಗಳಾಗಿದ್ದು, ಆದಾಯ ವೆಚ್ಚಗಳನ್ನು ಕಳೆದರೆ ಹೆಚ್ಚುವರಿಯಾಗಿ 79 ಲಕ್ಷ 43 ಸಾವಿರ ರೂ. ಉಳಿಯಲಿದೆ. ಬಂಡವಾಳ ಖಾತೆಯಲ್ಲಿ 1 ಕೋಟಿ 20 ಲಕ್ಷ 50 ಸಾವಿರ ರೂ., ಅಸಾಧಾರಣ ಖಾತೆಯಲ್ಲಿ 20 ಲಕ್ಷ 30 ಸಾವಿರ ರೂ. ಕೊರತೆಯಾಗುತ್ತಿದ್ದು, ಒಟ್ಟಾರೆ 50 ಲಕ್ಷದ 72 ಸಾವಿರದ 623 ರೂ. ಉಳಿತಾಯವಾಗಲಿದೆ ಎಂದು ಬಜೆಟ್ ವಿವರ ನೀಡಿದರು.


ದಿನೇ ದಿನೆ ಬೆಳೆಯುತ್ತಿರುವ ಪಟ್ಟಣದಲ್ಲಿ ಸೂರಿಲ್ಲದವರನ್ನು ಗುರುತಿಸಿ ಈಗಾಗಲೇ 670 ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಇನ್ನೂ 378 ಜನರಿಗೆ ವಿತರಣೆ ಹಂತದಲ್ಲಿದೆ. ವಸತಿ ಸಚಿವ ವಿ.ಸೋಮಣ್ಣ, ಶಾಸಕ ಸಿ.ಎಸ್.ನಿರಂಜನಕುಮಾರ್ ಸಹಕಾರದಲ್ಲಿ 3ನೇ ಹಂತದಲ್ಲಿ ಒಟ್ಟು 1446 ನಿವೇಶನ ನೀಡಲು ಉದ್ದೇಶಿಸಿದ್ದು, ಇದಕ್ಕೆ 10 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 75 ಕೋಟಿ ರೂ. ವೆಚ್ಚದ ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ಪಟ್ಟಣವನ್ನು ಮಾದರಿಯನ್ನಾಗಿಸಲು ಪ್ರವೇಶದಲ್ಲಿಯೇ 15 ಲಕ್ಷ ರೂ. ವೆಚ್ಚದಲ್ಲಿ ಶಿವಾನಂದ ವೃತ್ತವನ್ನು ನಿರ್ಮಿಸಲಾಗಿದೆ. ಕಿತ್ತೂರುರಾಣಿ ಚನ್ನಮ್ಮ ರಸ್ತೆ, ಬಸ್ ನಿಲ್ದಾಣದ ಎದುರು ರಸ್ತೆಯನ್ನು ರಾಜಪಥವನ್ನಾಗಿಸಲಾಗುತ್ತಿದೆ.

ಉದಯರವಿ ಪಾರ್ಕ್‌ನಲ್ಲಿ ಓಪನ್ ಜಿಮ್ ಆರಂಭಿಸಲು ಉಪಕರಣಗಳನ್ನು ಅಳವಡಿಸಲಾಗಿದೆ. ಸುಡುವ ಸ್ಮಶಾನವನ್ನು ಹೂಳುವ ಸ್ಮಶಾಸನಕ್ಕೆ ಸ್ಥಳಾಂತರ, 10ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಗುಡಿಸುವ 5 ಯಂತ್ರಗಳ ಖರೀದಿ, ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ, ಹಳೇ ಬಸ್ ನಿಲ್ದಾಣ ಹೈಟೆಕ್ ಮಾಡುವುದು, ಅಪರಾಧ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಠಾಣೆಗೆ 10 ಲಕ್ಷ ರೂ.ಅನುದಾನ ನೀಡಲಾಗಿದೆ. ಬಯಲು ರಂಗಮಂದಿರ ಉನ್ನತೀಕರಣ, ಮಲ್ಲಯ್ಯನಪುರ ರಸ್ತೆಯಲ್ಲಿ ಘನತ್ಯಾಜ್ಯ ನಿರ್ಹಹಣೆಗೆ 12.5 ಎಕರೆ ಭೂಮಿ ಖರೀದಿಸಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ನೂತನ ಪುರಸಭೆ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.


ಮುಖ್ಯಾಧಿಕಾರಿ ವಸಂತಕುಮಾರಿ, ಉಪಾಧ್ಯಕ್ಷೆ ದೀಪಿಕಾ, ಸದಸ್ಯರಾದ ನಾಗೇಶ್, ಬಸವರಾಜು, ಶಶಿಧರ(ದೀಪು), ಮಂಗಳಮ್ಮ, ವಿಜಯಾ, ಪಟ್ಟಾಬಿ, ರಾಜಗೋಪಾಲ, ಅಲ್ಲಾಹು, ದಿಲ್ ಷಾ ಬೇಗಂ ಸೇರಿದಂತೆ ಹಲವರು ಇದ್ದರು.