ಜಿಲ್ಲೆ

ಪುರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್

ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಇಂದಿಗೆ 2 ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲ ಬಗೆಹರಿಯದ ಕಾರಣ ಆಯ್ಕೆಯಾದ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ.

ಲಕ್ಷ್ಮೇಶ್ವರ ಪುರಸಭೆಗೆ 2018ರ ಆಗಸ್ಟ್ 31 ರಂದು ಚುನಾವಣೆ ನಡೆದು ಸೆಪ್ಟೆಂಬರ್ 3ರಂದು ನೂತನ ಸದಸ್ಯರ ಆಯ್ಕೆಯಾಗಿ ಅಂದೇ ಮೀಸಲಾತಿಪಟ್ಟಿ ಹೊರಬಿದ್ದಿತ್ತು. ಅಂದಿನ ಮೀಸಲಾತಿ ಪಟ್ಟಿ ಮತ್ತು ಕಳೆದ ಮಾರ್ಚ್​ನಲ್ಲಿ ಬಿಡುಗಡೆಯಾದ ಹೊಸ ಮೀಸಲಾತಿ ಪಟ್ಟಿಯ ವಿರುದ್ಧ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಇದರಿಂದ ಇದುವರೆಗೂ ಸದಸ್ಯರು ಅಧಿಕಾರ ಇಲ್ಲದೆ ತಾವೊಬ್ಬ ಜನಪ್ರತಿನಿಧಿ ಎನ್ನುವುದನ್ನು ಮರೆತು ತಮ್ಮ ಮೂಲವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

23 ಸದಸ್ಯ ಬಲ ಹೊಂದಿರುವ ಪುರಸಭೆ ಆಡಳಿತ ಮಂಡಳಿಗೆ 2 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ -9, ಬಿಜೆಪಿ-7, ಜೆಡಿಎಸ್-2 ಮತ್ತು ಐವರು ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ನಿರ್ವಣವಾಗಿತ್ತು. ಆಯ್ಕೆಯಾದ ಹೊಸದರಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಏನೆಲ್ಲಾ ಕಸರತ್ತು ನಡೆದಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಯಾವ ಪಕ್ಷವಾದರೂ ಅಧಿಕಾರದ ಗದ್ದುಗೆ ಏರಿದರೆ ಸಾಕು ಎನ್ನುವಂತಾಗಿದೆ ಆಯ್ಕೆಯಾದವರ ಪರಿಸ್ಥಿತಿ.

ಅಧಿಕಾರದ ಅಸ್ತ್ರ ಇಲ್ಲದ್ದರಿಂದ ಮತದಾರರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿಯೂ ಸದಸ್ಯರು ಅಸಹಾಯಕರಾಗಿದ್ದಾರೆ. ಕಳೆದ 2 ವರ್ಷಗಳಿಂದ ಸಾಮಾನ್ಯ ಸಭೆಗಳು ಜರುಗದೇ ಜನಸಾಮಾನ್ಯರ ಅಹವಾಲುಗಳು ಕಸದ ಬುಟ್ಟಿಗೆ ಸೇರಿವೆ. ಮುಖ್ಯವಾಗಿ ಪುರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ವಣಕ್ಕೆ ಅನುಮತಿ ಸಿಗದೇ ಜನ ಪರದಾಡುತ್ತಿದ್ದಾರೆ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಸ್ಥಗಿತಗೊಂಡಿದೆ.

ಆಡಳಿತ ಮಂಡಳಿ ಇದ್ದರೆ ಕಾನೂನಾತ್ಮಕ ಸಮಸ್ಯೆಗಳಿಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜನಸಾಮಾನ್ಯರ ಸಮಸ್ಯೆ ಈಡೇರಿಸಬಹುದಾಗಿದೆ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಬಹುದು. ಆಗಾಗ್ಗೆ ವರ್ಗಾವಣೆಗೊಂಡು ಬಂದು ಹೋಗುವ ಅಧಿಕಾರಿಗಳಿಂದ ಆಡಳಿತ ಯಂತ್ರ ತುಕ್ಕು ಹಿಡಿದಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.