ಮದ್ದೂರು: ಸರ್ಕಾರ ಆದೇಶದಂತೆ ಪಟ್ಟಣದ ಪುರಸಭೆಯ ವ್ಯಾಪ್ತಿಯ ನಿವಾಸಿಗಳಿಗೆ ‘ಬಿ’ ಖಾತಾ ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕರಿಗೆ ಬಿ ಖಾತಾ ವಿತರಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಟ್ಟಣ ವ್ಯಾಪ್ತಿಯಲ್ಲಿ ಬಿ ಖಾತಾ ವಿತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಪುರಸಭೆ ಕಚೇರಿಗೆ ಭೇಟಿ ನೀಡಿ ಬೇಕಾದ ದಾಖಲೆಗಳನ್ನು ನೀಡಿ ಬಿ ಖಾತಾ ಪಡೆದುಕೊಳ್ಳಬಹುದು. ಬಿ ಖಾತಾ ಪಡೆದುಕೊಳ್ಳುವುದರಿಂದ ಸಾರ್ವಜನಿಕರಿಗೆ ತಮ್ಮ ಆಸ್ತಿಯ ಬಗ್ಗೆ ಪುರಸಭೆಯ ವತಿಯಿಂದ ದಾಖಲೆ ಸಿಗುತ್ತದೆ. ಪುರಸಭೆಗೆ ತೆರಿಗೆ ಹಣ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆಸ್ತಿಯ ದಾಖಲೆ ಸಿಗಬೇಕೆಂದರೆ ಬಿ ಖಾತೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
2024ರ ಸೆ.10ರೊಳಗೆ ಯಾರು ಆಸ್ತಿಗಳನ್ನು ಖರೀದಿ ಮಾಡಿರುತ್ತಾರೆ ಅಂತವರು ಸೂಕ್ತ ದಾಖಲೆ ನೀಡಿ ಬಿ ಖಾತಾ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪಟ್ಟಣದ ಹಲವಾರು ಭಾಗಗಳಲ್ಲಿ ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದವು. ಇವರು ಪುರಸಭೆ ಕಾನೂನು ಪ್ರಕಾರ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್ ಮಾತನಾಡಿ, ಸಾರ್ವಜನಿಕರು ಬಿ ಖಾತಾ ಪಡೆದುಕೊಳ್ಳಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ಪೂರ್ವದಲ್ಲಿ ನೋಂದಾಯಿತ ಮಾರಾಟ ಕ್ರಯ ಪತ್ರಗಳು, ದಾನಪತ್ರ, ವಿಭಾಗಪತ್ರ, ಹಕ್ಕು ಖುಲಾಸೆ ಪತ್ರಗಳನ್ನು ನೀಡಬೇಕು. ಇದರ ಜತೆಗೆ ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಮತ್ತು ಸ್ವತ್ವಿನ ಫೋಟೋ ಹಾಗೂ ಮಾಲೀಕರ ಗುರುತಿನ ದಾಖಲೆ ಪ್ರತಿಗಳನ್ನು ಅರ್ಜಿಯೊಂದಿಗೆ ನೀಡಬೇಕೆಂದು ತಿಳಿಸಿದರು.
ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಮುಖ್ಯಾಧಿಕಾರಿ ಮೀನಾಕ್ಷಿ, ಪುರಸಭೆ ಸದಸ್ಯರು ಇದ್ದರು.