ಗುಂಡ್ಲುಪೇಟೆ: ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಪೈಪೋಟಿ ನಡೆಸಿದ್ದಾರೆ.
ಗ್ರೇಡ್ 1 ದರ್ಜೆಯ ಹುದ್ದೆಗೆ ಗ್ರೇಡ್ 2 ದರ್ಜೆಯ ಅಧಿಕಾರಿ ನಿಯೋಜಿಸಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಪುರಸಭೆಗೆ ಮುಖ್ಯಾಧಿಕಾರಿಯಾಗಿದ್ದ ಕೆ.ಪಿ.ವಸಂತಕುಮಾರಿ ಅವರ ಸ್ಥಾನಕ್ಕೆ ಚಾಮರಾಜನಗರ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಸರವಣ ಅವರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿತ್ತು. ಕಳೆದ 10 ದಿನದ ಹಿಂದೆ ಸರವಣ ಅಧಿಕಾರ ವಹಿಸಿಕೊಂಡಿದ್ದರು. ಆದರೆ ತನಗಿನ್ನೂ 4 ತಿಂಗಳ ಅವಧಿಯಿದ್ದು ಮಾರ್ಚ್ ವೇಳೆಗೆ ಮುಂಬಡ್ತಿಯೂ ಇದೆ. ಆದರೂ ತಮ್ಮ ಸ್ಥಾನಕ್ಕೆ ಗ್ರೇಡ್ 2 ಅಧಿಕಾರಿಯನ್ನು ನೇಮಕ ಮಾಡಿ ವರ್ಗಾವಣೆ ಮಾಡಿದ ಆದೇಶದ ವಿರುದ್ಧ ಕೆ.ಪಿ.ವಸಂತಕುಮಾರಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಲಿ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೆಎಟಿ ವಸಂತ ಕುಮಾರಿ ಅವರ ವರ್ಗಾವಣೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕಚೇರಿಗೆ ಆಗಮಿಸಿದ್ದರು.
ಕೆಎಟಿ ಆದೇಶ ಪತ್ರದೊಂದಿಗೆ ಆಗಮಿಸಿದ ವಸಂತಕುಮಾರಿ ಅವರಿಗೆ ಸರವಣ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ್ದರು. ಇದರಿಂದ ಶುಕ್ರವಾರ ಇಬ್ಬರೂ ಅಧಿಕಾರಿಗಳು ಮುಖ್ಯಾಧಿಕಾರಿ ಕಚೇರಿಯಲ್ಲಿ ಕುಳಿತುಕೊಳ್ಳುವಂತಾಗಿತ್ತು. ಇದು ಪುರಸಭೆಯ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಹುದ್ದೆ ಗ್ರೇಡ್-1 ಹುದ್ದೆ ಅಗಿದ್ದು, ನನಗೆ ಇನ್ನೂ ನಾಲ್ಕು ತಿಂಗಳು ಅಧಿಕಾರಾವಧಿ ಬಾಕಿಯಿದೆ. ಅಲ್ಲದೆ ಮಾರ್ಚ್ ವೇಳೆಗೆ ಮುಂಬಡ್ತಿ ದೊರಕುವುದರಿಂದ ಅಲ್ಲಿಯವರೆಗೆ ನಾನು ಇಲ್ಲಿಯೇ ಕಾರ್ಯನಿರ್ವಹಿಸುವ ಬಗ್ಗೆ ಕೆಎಟಿ ಮೂಲಕ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಬಂದಿದ್ದೇನೆ. ಕೆ.ಪಿ.ವಸಂತಕುಮಾರಿ ವಸಂತಕುಮಾರಿ ಅಧಿಕಾರಾವಧಿ ನಾಲ್ಕು ತಿಂಗಳು ಬಾಕಿಯಿದ್ದರೂ ರಾಜಕೀಯ ಹಿತಾಸಕ್ತಿಯಿಂದ ಅವರನ್ನು ವರ್ಗಾವಣೆ ಮಾಡಿಸಿ ಆ ಸ್ಥಳಕ್ಕೆ ಗ್ರೇಡ್2 ದರ್ಜೆಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಆದರೆ ವಸಂತಕುಮಾರಿ ಕೆಎಟಿ ಮೆಟ್ಟಿಲೇರಿ ವರ್ಗಾವಣೆಗೆ ತಡೆ ತಂದು ಕರ್ತವ್ಯಕ್ಕೆ ಹಾಜರಾದರೂ ಹೊಸ ಅಧಿಕಾರಿ ನ್ಯಾಯಾಲಯದ ಆದೇಶ ಪಾಲಿಸದೆ ಉದ್ಧಟತನ ತೋರಿಸುತ್ತಿದ್ದಾರೆ. ಇದರಿಂದ ನೌಕರರ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಲಿದೆ. ನಾಗೇಶ್, ಪುರಸಭೆ ಸದಸ್ಯ