ಹುಮನಾಬಾದ್: ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನು ಬೇರೊ ಬ್ಬರ ಹೆಸರಿಗೆ ಪರಭಾರೆ ಮಾಡಲು ಸಹಕರಿಸಿದ ಆರೋಪದ ಮೇಲೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಸೇರಿ ಐವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ವಂಚನೆ(420) ಪ್ರಕರಣ ದಾಖಲಾಗಿದೆ.
ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಬ್ಬಂದಿ ಶಿವಕುಮಾರ ಹಾಗೂ ವಿಶ್ವನಾಥ, ರೇಖಾ, ರೇಣುಕಾ ಎನ್ನುವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪಟ್ಟಣದ ಟೀಚರ್ಸ್ ಕಾಲನಿಯ ಜಯಶ್ರೀ ಎಂಬುವರು ಇವರ ವಿರುದ್ಧ ದೂರು ನೀಡಿದ್ದರು.
ಏನಾಗಿದೆ?: ಜಯಶ್ರೀ ಪತಿ ಸುಕೇಶಕುಮಾರ ಅವರಿಗೆ ಪಟ್ಟಣದ ಸರ್ವೆ ನಂ. 136/ಕೆ ದಲ್ಲಿ 30/40 ಪ್ಲಾಟ್ (ನಿವೇಶನ) ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ಶಾಖೆಯಿಂದ 1995ರ ಜುಲೈ 16ಂದು ಹಕ್ಕುಪತ್ರದ ಮೂಲಕ ಹಂಚಿಕೆ ಮಾಡಲಾಗಿತ್ತು. 2019ರ ಫೆಬ್ರವರಿ 28 ರಂದು ಸುಕೇಶಕುಮಾರ ಮೃತಪಟ್ಟಿದ್ದಾರೆ.
ಕೆಲವರು ಖುಲ್ಲಾ ನಿವೇಶನದ ಹಕ್ಕು ಪತ್ರವನ್ನು ನಕಲಿ ದಾಖಲಾತಿ ಸೃಷ್ಟಿಸಿ 2019ರ ಸೆಪ್ಟಂಬರ್ 6 ರಂದು ಪುರಸಭೆಯಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ ಸಹಕರಿಸಿದ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಬ್ಬಂದಿ ಶಿವಕುಮಾರ ಹಾಗೂ ಇತರರು ಕೂಡಿ ಸಮಾನ ಉದ್ದೇಶದಿಂದ ನಕಲಿ ನಿವೇಶನ ಹಕ್ಕು ಪತ್ರ ಸೃಷ್ಟಿಸಿ ಮೋಸ, ವಂಚನೆ ಮಾಡಿ ಅಪರಾಧ ಎಸಗಿದ್ದಾರೆ ಎಂದು ಜಯಶ್ರೀ ದೂರು ನೀಡಿದ್ದಾರೆ. ಇದರನ್ವಯ ಹುಮನಾಬಾದ್ ಪಿಎಸ್ಐ ರವಿಕುಮಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.