ಮೂಡಲಗಿ: ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನಧಿಕೃತ ಸ್ವತ್ತುಗಳಿಗೂ ಇ-ಖಾತಾ ಅಭಿಯಾನ ನಡೆಯಲಿದ್ದು, ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮೂಡಲಗಿ ಪುರಸಭೆ ವ್ಯಾಪ್ತಿಯ ಸುಮಾರು 2,500ಕ್ಕೂ ಹೆಚ್ಚು ಆಸ್ತಿಗಳು ಇ-ಖಾತಾಕ್ಕೆ ಒಳಪಟ್ಟರೆ ಅಂದಾಜು 2 ರಿಂದ 2.50 ಕೋಟಿ ರೂ. ಆದಾಯ ಪುರಸಭೆಗೆ ಹರಿದು ಬರಲಿದೆ. ಲಾನುಭವಿಗಳು ಮಧ್ಯವರ್ತಿಗಳ ಸಂಪರ್ಕ ಮಾಡದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಇ-ಖಾತಾ ಉತಾರಾ ಪಡೆದುಕೊಳ್ಳಬೇಕು. ಮೇ ತಿಂಗಳ ಅಂತ್ಯದವರೆಗೆ ಅಭಿಯಾನ ನಡೆಯಲಿದೆ ಎಂದರು. ಸ್ಥಳೀಯ ಎಸ್ಸಿ ಕಾಲನಿಯ ಸುಮಾರು 300 ಕುಟುಂಬಗಳಿಗೆ ಖಾತಾ ಉತಾರ ಮಾಡಿಕೊಟ್ಟು ಅಂಥ ಬಡ ಕುಟುಂಬಗಳಿಗೆ ಅನುಕೂಲ ಮಾಡಬೇಕು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿಗೊಂಡಿವೆ. ಹೊಸ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಬಜೆಟ್‌ನಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಹದಗೆಟ್ಟ ರಸ್ತೆಗಳ ದುರಸ್ತಿಗೆ ಅನುದಾನ ನೀಡುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಿನಂತಿಸುತ್ತೇನೆ. ಬಹು ನಿರೀಕ್ಷಿತ ಮೂಡಲಗಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಆದರೆ, ಅನುದಾನದ ಕೊರತೆಯಿಂದ ಸರ್ಕಾರ ಮಟ್ಟದಲ್ಲಿ ವಿಳಂಬವಾಗುತ್ತಿದೆ. 8.60 ಕೋಟಿ ರೂ.ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ನಡೆಯುತ್ತಿವೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಒಟ್ಟು 140.69 ಕೋಟಿ ರೂ.ವೆಚ್ಚದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಖುರ್ಷದಾ ನದಾಫ್, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಸದಸ್ಯರಾದ ಸಂತೋಷ ಸೋನವಾಲ್ಕರ್, ರವಿ ಸಣ್ಣಕ್ಕಿ, ಹನುಮಂತ ಗುಡ್ಲಮಣಿ, ಜಯಾನಂದ ಪಾಟೀಲ, ಸುಭಾಷ ಸಣ್ಣಕ್ಕಿ, ಅಬ್ದುಲ್ ಡಾಂಗೆ, ಆನಂದ ಟಪಾಲ್, ಈರಪ್ಪ ಮುನ್ಯಾಲ್, ಹುಸೇನ್ ಶೇಖ, ಅದಮ ತಂಬೋಳಿ, ಶಿವು ಸಣ್ಣಕ್ಕಿ ಇತರರಿದ್ದರು.
ಇ-ಖಾತಾ ಅಭಿಯಾನ ಜಾರಿಗೆ ತಂದು ಸಿಎಂ ಸಿದ್ಧರಾಮಯ್ಯ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ವೈಯಕ್ತಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಾಲಚಂದ್ರ ಜಾರಕಿಹೊಳಿ ಶಾಸಕ