ಕುಣಿಗಲ್ : ಸಾರ್ವಜನಿಕರು ತಮ್ಮ ಸ್ವತ್ತಿನ ದಾಖಲಾತಿಗಳನ್ನು ಮಾಡಿಸಿಕೊಳ್ಳಲು ಪುರಸಭೆಗೆ ಅಲೆದು ಸಾಕಾಗಿ ಹಿಡಿಶಾಪ ಹಾಕಿಹೋಗುವ ನಿದರ್ಶನಗಳೇ ಹೆಚ್ಚು. ಹೀಗಾಗಿ ಪುರಸಭೆ ಆಡಳಿತ ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ಮಾಡಿಕೊಡುವ ಮೂಲಕ ಹೊಸ ಭಾಷ್ಯ ಬರೆದಿದೆ.
ಪುರಸಭೆ ನೂತನ ಅಧ್ಯಕ್ಷ ರಂಗಸ್ವಾಮಿ ಅವರು ಪುರಸಭೆ ನಡಿಗೆ ಮನೆ ಮನೆ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಜನರ ಸಮಸ್ಯೆ ಅಲಿಸಿ ಸ್ಥಳದಲ್ಲೇ ದಾಖಲಾತಿಗಳನ್ನು ಮಾಡಿಕೊಡಲು ಮುಂದಾಗಿದ್ದು, ಈ ಭಾಗವಾಗಿ ಶುಕ್ರವಾರ 19ನೇ ವಾರ್ಡ್‌ನಲ್ಲಿ ಇಡೀ ಪುರಸಭೆ ಆಡಳಿತವೇ ನೆರೆದಿತ್ತು. ವಾರ್ಡ್‌ನ ಪ್ರತಿ ಮನೆ ಭೇಟಿ ನೀಡಿ ಸಮಸ್ಯೆ ಆಲಿಸಿತು. ಒಂದು ಕಡೆ ಪುರಸಭೆ ತಾತ್ಕಾಲಿಕ ಕಚೇರಿ ಸ್ಥಾಪಿಸಿ ಅಲ್ಲಿಯೇ ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು. ಎಲ್ಲ ವಿಭಾಗದ ಅಧಿಕಾರಿಗಳು ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಎರಡು ಒಂದೇ ಕಡೆ ಜನರಿಗೆ ಲಭ್ಯವಾಗಿ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಯಿತು.
ಜತೆಗೆ ಇಡೀ ವಾರ್ಡ್ ಅನ್ನು ಒಂದೇ ದಿನದಲ್ಲಿ ಪುರಸಭೆಯ ಪೌರ ಕಾರ್ಮಿಕರು ಸಾಮೂಹಿಕವಾಗಿ ಸ್ವಚ್ಛಗೊಳಿಸಿದರು. ಬೀದಿ ದೀಪಗಳನ್ನು ಅಳವಡಿಸುವುದು, ರಿಪೇರಿ ಕೆಲಸವೂ ನಡೆಯಿತು. ಒಟ್ಟಾರೆ ಒಂದೇ ದಿನದಲ್ಲಿ ಒಂದು ವಾರ್ಡ್‌ನ ಸಾಕಷ್ಟು ಸಮಸ್ಯೆ ಪರಿಹಾರವಾದವು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅವರು ಮೂಲತಃ ಹೋರಾಟದ ಮೂಲಕ ಬೆಳೆದು ಪುರಸಭೆ ಅಧ್ಯಕ್ಷ ಗಾದಿವರೆಗೆ ಬಂದಿದ್ದಾರೆ. ಹೋರಾಟದಲ್ಲಿಯೂ ಅವರು ಸದಾ ಹೊಸತನ ಅಳವಡಿಸಿಕೊಂಡು ಹೋರಾಟ ಮಾಡುತ್ತಿದ್ದರೂ ಈಗ ಆಡಳಿತದಲ್ಲಿಯೂ ಹೊಸತನ ಅಳವಡಿಸಿಕೊಂಡು ಸಾರ್ವಜನಿಕವಾಗಿ ಕೆಲಸ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಜನರು ಸ್ವತ್ತಿನ ದಾಖಲಾತಿಗಳು ಸೇರಿ ಹಲವು ಸಮಸ್ಯೆ ಹೊತ್ತು ಅಲೆಯುತ್ತಿರುವುದನ್ನು ನೋಡಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಪುರಸಭೆಯ ಸದಸ್ಯರೊಂದಿಗೆ ಚರ್ಚಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಒಂದೇ ದಿನ 15 ಇ-ಖಾತೆ, 15 ಖಾತೆ ಬದಲಾವಣೆ ಸೇರಿ ಇಡೀ ವಾರ್ಡ್‌ನ ಸ್ವಚ್ಛತೆ, ಕೆಟ್ಟಿದ್ದ ವಿದ್ಯುತ್ ದೀಪಗಳ ಸರಿಪಡಿಸಲಾಗಿದೆ. ಸ್ಥಳದಲ್ಲೇ ಡಿಜಿಟಲ್ ಮೂಲಕ ಕಂದಾಯವನ್ನು ಸಾರ್ವಜನಿಕರು ಪಾವತಿ ಮಾಡಿದ್ದಾರೆ ಎಂದು ಪುರಸಭೆ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು. ಪ್ರತಿ ತಿಂಗಳು ಒಂದು ವಾರ್ಡ್‌ನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನೂತನ ಅಧ್ಯಕ್ಷ ರಂಗಸ್ವಾಮಿ ಅವರು ನೂತನ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಪುರಸಭೆ ಅಧಿಕಾರಿಗಳು ಸಹಕಾರ ನೀಡಿದ್ದೇವೆ. ಕರೊನಾ ಸಮಯದಲ್ಲಿ ಜನರನ್ನು ಕಚೇರಿಗೆ ಕರೆಸಿಕೊಳ್ಳುವ ಬದಲು ಅವರ ಮನೆ ಬಾಗಿಲಿಗೆ ತೆರಳಿ ದಾಖಾಲಾತಿಗಳನ್ನು ಮಾಡಿಕೊಡುವ ಕೆಲಸ ತೃಪ್ತಿ ತಂದಿದೆ. ರವಿಕುಮಾರ್, ಮುಖ್ಯಾಧಿಕಾರಿ