ಜಿಲ್ಲೆ

ಪುರಸಭೆ ಎದುರು ಕೂಲಿಕಾರರ ಪ್ರತಿಭಟನೆ

ಬ್ಯಾಡಗಿ: ಎರಡು ವರ್ಷಗಳ ಹಿಂದೆ ಖರೀದಿಸಿದ ಪುರಸಭೆಯ 10 ಎಕರೆ ಜಾಗದಲ್ಲಿ ಬಡ ಕೂಲಿ ಕಾರ್ವಿುಕರಿಗೆ ನಿವೇಶನ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಭ್ರಷ್ಟಾಚಾರ ನಿಮೂಲನೆ ಸಮಿತಿ ಹಾಗೂ ಕರವೇ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ನಿವಾಸಿಗಳು ಬುಧವಾರ ಪುರಸಭೆ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಭ್ರಷ್ಟಾಚಾರ ನಿಮೂಲನೆ ಸಮಿತಿ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, 7 ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಲಾಗಿದೆ. ಬಳಿಕ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ. 2 ವರ್ಷಗಳ ಹಿಂದೆ 2 ಕೋ.ರೂ. ವೆಚ್ಚದಲ್ಲಿ ಮಲ್ಲೂರು ರಸ್ತೆಯಲ್ಲಿ 10 ಎಕರೆ ಜಾಗ ಖರೀದಿಸಲಾಗಿದೆ. ಈ ಕುರಿತು ಆಶ್ರಯ ಕಮಿಟಿ ನಾಲ್ಕೈದು ಬಾರಿ ಸಭೆ ನಡೆಸಿ ಅರ್ಜಿಗಳನ್ನು ಪಡೆದಿದೆ. ಆದರೆ, ಈವರೆಗೂ ಯಾರಿಗೂ ಹಕ್ಕುಪತ್ರ ನೀಡಿಲ್ಲ. ಕೂಡಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಬಡವರಿಗೆ ಹಕ್ಕುಪತ್ರ ನೀಡುವ ಕುರಿತು ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.

ಕೂಲಿಕಾರ ಮಹಿಳೆ ಶಾಂತವ್ವ ಕುಸಗೂರು ಮಾತನಾಡಿ, ಪ್ರತಿ ತಿಂಗಳು 3 ಸಾವಿರ ರೂ. ಬಾಡಿಗೆ ನೀಡಬೇಕಿದ್ದು, ಜೀವನ ನಡೆಸುವುದು ಸಮಸ್ಯೆಯಾಗಿದೆ. ಕೂಡಲೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ರವಿ ಕೊರಮರ, ಮುಖ್ಯಾಧಿಕಾರಿ ವಿ.ಎಂ. ಪೂಜಾರ ಸಭೆ ನಡೆಸಿ, ನಿವೇಶನ ಕುರಿತು ರ್ಚಚಿಸಿದರು. ಮುಂದಿನ ಸಭೆಯಲ್ಲಿ ನಿರ್ಧರಿಸಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು. ಆದರೆ, ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಕರುನಾಡು ಸಂಘದ ತಾಲೂಕು ಘಟಕದ ಅಧ್ಯಕ್ಷೆ ಪರೀಧಾಬಾನು ನದಿಮುಲ್ಲಾ, ಕರವೇ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೋವಿ, ಗುತ್ತೆವ್ವ ಮಾಳಗಿ, ಜಮಿರಾಬಿ ತಾಳಿಕೋಟಿ, ಲಲಿತವ್ವ ಚಲವಾದಿ, ಶಯದ್ ಬೇಪಾರಿ, ಮಾಳವ್ವ ಚಿಕ್ಕಣ್ಣನವರ ಇತರರಿದ್ದರು.

2 ವರ್ಷಗಳಿಂದ ನಿವೇಶನ ನೀಡುವ ಪ್ರಕ್ರಿಯೆ ನಡೆದಿದೆ. 824 ಅರ್ಜಿದಾರರಿಗೆ ನಿವೇಶನ ಸಹಿತ ಮನೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ವಂತಿಕೆ ಹಣ ಕಟ್ಟುವುದು ಸೇರಿ ಹಲವು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಹಕ್ಕುಪತ್ರ ವಿತರಣೆ ಸ್ಥಗಿತಗೊಂಡಿತ್ತು. ಡಿ. 19 ರಂದು ಜರುಗುವ ಸಾಮಾನ್ಯ ಸಭೆಯಲ್ಲಿ ಈ ಕುರಿತು ರ್ಚಚಿಸಲಾಗುವುದು.| ವಿ.ಎಂ. ಪೂಜಾರ ಪುರಸಭೆ ಮುಖ್ಯಾಧಿಕಾರಿ