ಆನೇಕಲ್: ಆನೇಕಲ್ ಪುರಸಭೆ ಅಧ್ಯಕ್ಷರು ಬಹುಮತ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಎದುರು ಬಿಜೆಪಿ ಬೆಂಬಲಿತ ಸದಸ್ಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.
ಪುರಸಭೆ ಅಧ್ಯಕ್ಷರು ಬಹುಮತ ಸಾಬೀತು ಪಡಿಸಬೇಕು ಹಾಗೂ ಅಕ್ರಮ ಬಡಾವಣೆ ನಿರ್ಮಿಸಿ ಪುರಸಭೆಗೆ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗದ ಅಧಿಕಾರಿಗಳ ವಿರುದ್ಧ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ್ದೇನೆ ಎಂದು ಗೋಪಿನಾಥ ರೆಡ್ಡಿ ತಿಳಿಸಿದರು.
ಮಾ.31 ರಂದು ಇಲಾಖೆಗೆ ಸಂಬಂಧಪಟ್ಟ ಸಚಿವರ ಬಳಿಗೆ ಬಿಜೆಪಿ ಸದಸ್ಯರ ನಿಯೋಗವನ್ನು ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯ ಬಿ. ನಾಗರಾಜ್ ಮಾತನಾಡಿ, ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. 24 ಸದಸ್ಯರಲ್ಲಿ ಕೇವಲ ಹನ್ನೊಂದು ಸದಸ್ಯರೊಂದಿಗೆ ಬಜೆಟ್ ಮಂಡನೆ ಮಾಡಿರುವುದು ಸರಿಯಲ್ಲ. ಬಜೆಟ್ ಕೂಡ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಪುರಸಭೆ ಸದಸ್ಯ ಏರ್ಟೆಲ್ ಸುರೇಶ್ ಮಾತನಾಡಿ, ಬಜೆಟ್ ಮಂಡನೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೈರಾಗಿರುವುದ್ದರೂ ಅಧ್ಯಕ್ಷರು ಅಧಿಕಾರಕ್ಕೆ ಅಂಟಿಕೊಂಡು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ದೂರಿದರು.
ಪುರಸಭೆ ಸದಸ್ಯರಾದ ಶ್ರೀಕಾಂತ್, ಸುಧಾ ನಿರಂಜನ್, ಭಾಗ್ಯಲಕ್ಷ್ಮೀ ಶ್ರೀನಿವಾಸ್ ಬಾಬು, ಅನಿತಾ ವೆಂಕಟೇಶ್, ಅನಸೂಯಮ್ಮ ಗೋಪಾಲ್, ಪ್ರಕಾಶ್, ನಾಮನಿರ್ದೇಶಿತ ಸದಸ್ಯರಾದ ಜಗದೀಶ್, ಮಂಜುನಾಥ್, ಜನಾರ್ದನ್, ಸುಧಾ ಜಯದೇವ್, ನಿತಿನ್, ಮುರಳಿ ಮತ್ತಿತರರು.