ಜಿಲ್ಲೆ

ಪುರಸಭೆ ಅಧಿಕಾರಕ್ಕಾಗಿ ಕಸರತ್ತು

ನವಲಗುಂದ: ಪಟ್ಟಣದ ಪುರಸಭೆಗೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು, ಅಧಿಕಾರದ ಚುಕ್ಕಾಣಿಗಾಗಿ ಭಾರಿ ಕಸರತ್ತು ನಡೆದಿದೆ.

ಪುರಸಭೆಯ ಒಟ್ಟು 23 ವಾರ್ಡ್​ಗಳಿಗೆ ಚುನಾಯಿತರಾದ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯಲಾಗದೆ ನಿರಾಸೆಗೊಂಡಿದ್ದರು. ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿದ್ದು, ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಪುರಸಭೆಯ 23 ವಾರ್ಡ್​ಗಳ ಪೈಕಿ ಒಬ್ಬರು ಪಕ್ಷೇತರ, 9 ಜೆಡಿಎಸ್, 7 ಕಾಂಗ್ರೆಸ್, 6 ಬಿಜೆಪಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಮೂರು ಪಕ್ಷಗಳಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಮೈತ್ರಿ ಮಾಡಿಕೊಳ್ಳವುದು ಅನಿವಾರ್ಯವಾಗಿದೆ.

ಪಕ್ಷೇತರ ಅಭ್ಯರ್ಥಿ ಅಪ್ಪಣ್ಣ ಹಳ್ಳದ ಜೆಡಿಎಸ್​ಗೆ ಸೇರ್ಪಡೆಯಾಗಿದ್ದರಿಂದ ಜೆಡಿಎಸ್ ಹತ್ತು ಸ್ಥಾನಕ್ಕೇರಿದೆ. ಆದರೂ, ಅಧಿಕಾರಕ್ಕೇರಲು ಇನ್ನೂ ಮೂರು ಸ್ಥಾನ ಬೇಕು. ಅದಕ್ಕಾಗಿ ಕಾಂಗ್ರೆಸ್ ಚುನಾಯಿತ ಸದಸ್ಯರ ಮನವೊಲಿಸುವಲ್ಲಿ ಜೆಡಿಎಸ್ ತಳಮಟ್ಟದಿಂದ ಕಸರತ್ತು ನಡೆಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸ್ಥಳೀಯ ಮಟ್ಟದಲ್ಲಿ ರಾಜಕೀಯ ನಾಯಕರಲ್ಲಿನ ಸಾಮ್ಯತೆಯಿಂದ ತಾಲೂಕು ಪಂಚಾಯಿತಿಯಲ್ಲಿ ಮೈತ್ರಿ ಮಾಡಿಕೊಂಡಂತೆ ಜೆಡಿಎಸ್ ಪಕ್ಷವನ್ನು ಹೊರಗಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪುರಸಭೆ ಗದ್ದುಗೆಯನ್ನು ತಮ್ಮತ್ತ ಸೆಳೆದುಕೊಳ್ಳುವ ತವಕದಲ್ಲಿದ್ದಾರೆ. ಅದರಂತೆ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಭಾರಿ ಕಸರತ್ತು ನಡೆಸಿದ್ದು, ಮೂವರು ಸದಸ್ಯರ ಮನವೊಲಿಸಿ ಜೆಡಿಎಸ್ ಗದ್ದುಗೆ ಏರಲು ತಂತ್ರ ನಡೆಸಿದ್ದಾರೆ. ಒಟ್ಟಾರೆ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯಲಿದೆ. ಯಾರು ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬá-ದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಂತರ ತಿಳಿದು ಬರಲಿದೆ.

ಆಕಾಂಕ್ಷಿಗಳು ಯಾರು?: ಕಾಂಗ್ರೆಸ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ 18ನೇ ವಾರ್ಡ್​ನ ಮಂಜುನಾಥ ಜಾಧವ, ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್​ನ ಪದ್ಮಾವತಿ ಪೂಜಾರ ಮತ್ತು 15ನೇ ವಾರ್ಡ್​ನ ಖೈರುನಬಿ ನಾಶಿಪುಡಿ ಆಕಾಂಕ್ಷಿಯಾಗಿದ್ದಾರೆ. ಅದರಂತೆ ಬಿಜೆಪಿಯಲ್ಲಿ 14ನೇ ವಾರ್ಡ್​ನ ಮಹಾಂತೇಶ ಕಲಾಲ ಮತ್ತು 13ನೇ ವಾರ್ಡ್​ನ ಶರಣಪ್ಪ ಹಕ್ಕರಕಿ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್​ನ ವಿಜಯ ಕಲಾಲ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್​ನ ಪ್ರಕಾಶ ಶಿಗ್ಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್​ನ ಸುರೇಶ ಮೇಟಿ, 4ನೇ ವಾರ್ಡ್​ನ ಬಾಬಾಜಾನ ಮಕಾನದಾರ ಆಕಾಂಕ್ಷಿಗಳಾಗಿದ್ದಾರೆ.