ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ದಸರಾ ಮಹೋತ್ಸವ ಸನಿಹವಾಗುತ್ತಿದ್ದರೂ ನಗರದ ರಂಗಚಾರ್ಲು ಸ್ಮಾರಕ ಭವನ (ಪುರಭವನ)ಕ್ಕೆ ಜೀರ್ಣೋದ್ಧಾರ ಭಾಗ್ಯ ದೊರೆಯುತ್ತಿಲ್ಲ.
ಪುರಭವನ ಎಂದೇ ಹೆಸರುವಾಸಿಯಾಗಿ ನವರಾತ್ರಿ ಸಂದರ್ಭದಲ್ಲಿ ಸಂಗೀತ, ಕಲೆ, ನಾಟಕದ ವೈಭವಕ್ಕೆ ಮೆರುಗು ನೀಡುತ್ತಿದ್ದ ಈ ಕಟ್ಟಡ ಇದೀಗ ಕಳೆಗುಂದಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಅ.15 ರಿಂದ 24ರ ವರೆಗೆ ನಡೆಯಲಿದೆ. ಅಷ್ಟೊತ್ತಿಗೆ ಪುರಭವನ ಕಟ್ಟಡದ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳುವುದು ಬಹುತೇಕ ಅನುಮಾನವೇ ಸರಿ. ಒಂದು ಕಾಲದ ದಸರಾ ಉತ್ಸವದ ಪ್ರಮುಖ ವೇದಿಕೆಯಾಗಿದ್ದ ಈ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡ ದುಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
ಪಾರಂಪರಿಕ ನಗರಿ ಮೈಸೂರಿನಲ್ಲಿ ಬಹಳಷ್ಟು ಐತಿಹಾಸಿಕ ಕಟ್ಟಡಗಳು ನಿರ್ಲಕ್ಷೃಕ್ಕೆ ಒಳಪಟ್ಟಿವೆ. ನಿರ್ವಹಣೆ, ಸಂರಕ್ಷಣೆ ಕೊರತೆಯಿಂದ ಅವಸಾನದತ್ತ ಮುಖ ಮಾಡಿವೆ. 138 ವರ್ಷ ಹಳೇ ಕಟ್ಟಡವಾದ ಪುರಭವನವೂ ಇದಕ್ಕೆ ಒಂದು ನಿದರ್ಶನ.
ಶತಮಾನದಷ್ಟು ಹಳೇ ಚರಿತ್ರೆ ಹೊಂದಿರುವ ಈ ಕಟ್ಟಡ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದೆ. ತಕ್ಷಣವೇ ದುರಸ್ತಿ ಮಾಡಬೇಕಿದೆ. ಇಲ್ಲವಾದರೆ ಇದು ಕೂಡ ಲ್ಯಾನ್ಸ್‌ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಕಟ್ಟಡದಂತೆ ಕುಸಿದು ಬೀಳುವುದು ನಿಶ್ಚಿತ. ಪುರಭವನಕ್ಕೆ ತ್ವರಿತಗತಿಯಲ್ಲಿ ಕಾಯಕಲ್ಪ ನೀಡದೇ ಇದ್ದರೆ ಇದನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಕಡಿಮೆ ಆಯಿತು ಸಾಂಸ್ಕೃತಿಕ ಚಟುವಟಿಕೆಗಳು:
ಸಾರ್ವಜನಿಕರ ದೇಣಿಗೆಯಿಂದ 1885ರಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು ಪುರಭವನಕ್ಕಾಗಿ ವಹಿಸಲಾಯಿತು. ಈ ಹಿಂದೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಿವೆ. ಈ ಕಟ್ಟಡದ ಸುತ್ತಲೂ ಇರುವ ವಿಶಾಲ ಆವರಣ ಸಾರ್ವಜನಿಕ, ರಾಜಕೀಯ ಸಮಾರಂಭಗಳು, ತಾತ್ಕಾಲಿಕ ಜಾತ್ರೆಗಳು, ಮನರಂಜನಾ ಉತ್ಸವಗಳಿಗೆ ಬಳಕೆಯಾಗುತ್ತಿತ್ತು. ಆದರೀಗ ಇದೆಲ್ಲ ನೆನಪು ಮಾತ್ರ. ಆಗೊಮ್ಮೆ-ಈಗೊಮ್ಮೆ ಇಲ್ಲಿ ಸಭಾ ಕಾರ್ಯಕ್ರಮಗಳು ಮಾತ್ರ ನಡೆಯುತ್ತಿವೆ. ಇಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯೂ ಕಡಿಮೆಯಾಗಿವೆ. ರಾಜಕೀಯ ಸಮಾವೇಶಗಳು ಇಲ್ಲವಾಗಿದೆ. ಇದಕ್ಕೆ ಕಾರಣ ಕಟ್ಟಡದ ದುಸ್ಥಿತಿ.
ಪಾಳು ಬಿದ್ದ ಕಟ್ಟಡ:
ಮೈಸೂರಿನ ಐತಿಹಾಸಿಕ ಕುರುಹು ಈ ಪುರಭವನ ಕಟ್ಟಡ. ಇದು ಅರಮನೆಯ ಆವರಣದ ಉತ್ತರ ಮಹಾದ್ವಾರದ ಬಳಿ, ನಗರದ ಹೃದಯ ಭಾಗದಲ್ಲೇ ನೆಲೆಯೂರಿದೆ. ದೊಡ್ಡ ಗಡಿಯಾರದ ಸಮೀಪ ಇರುವ ಈ ಭವನ ಪಾರಂಪರಿಕ ಪ್ರವಾಸಿ ತಾಣವಾಗಿ ಕಂಗೊಳಿಸಬೇಕಿತ್ತು. ದುರಂತವೆಂದರೆ ಇದು ಹಾಳು ಕೊಂಪೆಯಾಗಿ ಪಾಳುಬಿದ್ದಿದೆ.
ಸೋರುತ್ತಿರುವ ಮಾಳಿಗೆ:
ಕಟ್ಟಡದ ಛಾವಣಿಯಿಂದ ಮಳೆ ನೀರು ಜಿನುಗುತ್ತಿದೆ. ಕಟ್ಟಡದ ಗೋಡೆ ದುರ್ಬಲಗೊಳ್ಳುತ್ತಿದೆ. ಛಾವಣಿಯಿಂದ ಗಾರೆಯ ಚಕ್ಕೆ ಕುಸಿಯುತ್ತಿದೆ. ಛಾವಣಿಗೆ ಕಬ್ಬಿಣದ ಸಲಾಕೆಗಳೇ ಆಶ್ರಯವಾಗಿವೆ. ಇದು ಪೂರ್ಣ ಪ್ರಮಾಣದಲ್ಲಿ ಕುಸಿಯಬಹುದೆಂಬ ಆತಂಕದಿಂದ ಸಲಾಕೆಗಳಿಂದ ಸೆಂಟ್ರಿಂಗ್ ಕಟ್ಟಿ ತಾತ್ಕಾಲಿಕ ಆಸರೆ ಕಲ್ಪಿಸಿಕೊಡಲಾಗಿದೆ. ಇದರಿಂದ ಕಬ್ಬಿಣದ ಸಲಾಕೆಗಳೇ ಛಾವಣಿಯ ಭಾರ ಹೊತ್ತಿವೆ.
ಬಾಗಿಲು ತಿಂದ ಗೆದ್ದಲು
ಛಾವಣಿಗೆ ಕೆಲವೆಡೆ ಬಳಸಲಾದ ಮರ, ಬಾಗಿಲು, ಕಿಟಕಿ ಬಾಗಿಲುಗಳು ಗೆದ್ದಲು ಪಾಲಾಗುತ್ತಿವೆ. ಇದರಿಂದ ಕಿಟಿಕಿ, ಬಾಗಿಲುಗಳು ಮುರಿದು ಬೀಳುವಂತಾಗಿದೆ. ಪುರಭವನದ ವೇದಿಕೆಗೆ ಹೊಂದಿಕೊಂಡಂತೆ ಬಲಬದಿಯಲ್ಲಿರುವ ಬಾಗಿಲುಗಳನ್ನು ಗೆದ್ದಲು ಹುಳುಗಳು ತಿಂದುಹಾಕಿವೆ. ಮತ್ತೊಂದೆಡೆ, ಕಟ್ಟಡದ ಎಡಭಾಗದಲ್ಲಿದ್ದ ಪುರಭವನ ಸ್ಥಾಯಿ ಸಮಿತಿಯ ಅಧ್ಯಕ್ಷರ ಕೊಠಡಿಯ ಗೋಡೆಗೆ ಮರದ ಪಟ್ಟಿಗಳಿಂದ ಅಲಂಕರಿಸಿ ನಿರ್ಮಿಸಲಾಗಿದ್ದ ವುಡ್‌ವಾಲ್ ಅನ್ನು ಗೆದ್ದಲು ತಿಂದಿವೆ. ಕೊಠಡಿಯ ಛಾವಣಿಯೂ ಹಾಳಾಗಿದೆ. ಗೆದ್ದಲು ಕಾಟ ಹೆಚ್ಚಾಗಿದೆ.
ಕೈಕೊಟ್ಟ ಗುತ್ತಿಗೆದಾರರು:
ಪುರಭವನದ ಕಟ್ಟಡಕ್ಕೆ ಮರು ಜೀವ ನೀಡಲು ಮೈಸೂರು ಮಹಾನಗರ ಪಾಲಿಕೆ ತೀರ್ಮಾನಿಸಿತ್ತು. ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಪುರಭವನದ ನವೀಕರಣ ಕೆಲಸದ ಗುತ್ತಿಗೆಯನ್ನು ವಹಿಸಲಾಗಿತ್ತು. ಇದರೊಂದಿಗೆ ಪುರಭವನದ ಆವರಣದಲ್ಲಿ 18.28 ಕೋಟಿ ರೂ. ವೆಚ್ಚದಲ್ಲಿ ವಿವಿಧೋದ್ದೇಶದ ವಾಹನಗಳ ನಿಲುಗಡೆ ಕಟ್ಟಡ ನಿರ್ಮಾಣಕ್ಕೂ ಗುತ್ತಿಗೆ ನೀಡಲಾಗಿತ್ತು. 2011ರ ಏಪ್ರಿಲ್ 29ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಿಯಮಾನುಸಾರ 2012ರ ಏಪ್ರಿಲ್‌ನಲ್ಲಿ ಕೆಲಸ ಮುಗಿಯಬೇಕಿತ್ತು. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಛಾಬ್ರಿಯಾ ಸಂಸ್ಥೆ ಹೆಚ್ಚುವರಿ ಅನುದಾನ ನೀಡುವಂತೆ ಪಾಲಿಕೆಗೆ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಪಾಲಿಕೆ ಒಪ್ಪಲಿಲ್ಲ. ಈ ಕಾರಣ ಗುತ್ತಿಗೆ ಪಡೆದಿದ್ದ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದೆ. ಇದರಿಂದ ಈ ಕೆಲಸವನ್ನು ಕಾರ್ಯಗತಗೊಳಿಸಲು ವಿಳಂಬವಾಗಿದೆ. ಬರೋಬ್ಬರಿ 12 ವರ್ಷದಿಂದ ಕಟ್ಟಡದ ನವೀಕರಣ ಕೆಲಸಕ್ಕೆ ಗ್ರಹಣ ಹಿಡಿದಿದೆ. ಇದು ಬಿಡುವ ಲಕ್ಷಣಗಳೇ ಗೋಚರವಾಗುತ್ತಿಲ್ಲ.
ಹಣವಿದ್ದರೂ ಕೆಲಸ ಮಾಡಲಾಗುತ್ತಿಲ್ಲ:
ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಇತ್ಯರ್ಥವಾದರೆ ಪುರಾತತ್ವ ಇಲಾಖೆಯಿಂದಲೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಅದಕ್ಕೆ ಬೇಕಾದ ಅನುದಾನವನ್ನು ಪಾಲಿಕೆ ನೀಡಲು ಮುಂದಾಗಿದೆ. ಈಗಾಗಲೇ ಪುರಭವನದ ಕಟ್ಟಡ ದುರಸ್ತಿ, ಲೈಟಿಂಗ್ಸ್, ವೈರಿಂಗ್, ಮುಂಭಾಗದ ಉದ್ಯಾನ ನಿರ್ಮಾಣಕ್ಕೆ ಅಂದಾಜು 7-8 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ತಯಾರು ಮಾಡಿ ಇಟ್ಟುಕೊಳ್ಳಲಾಗಿದೆ. ಆದರೆ, ಅದಕ್ಕೆ ಅವಕಾಶವೇ ಇನ್ನೂ ದೊರೆಯುತ್ತಿಲ್ಲ.
ಕಟ್ಟಡ ಉಳಿಸಿಕೊಳ್ಳಲಾಗುತ್ತಿಲ್ಲ:
ಚಾಮರಾಜ ಒಡೆಯರ್ ಅವರ ಅಧಿಕಾರಾವಧಿಯಲ್ಲಿ ಮೈಸೂರು ಸಂಸ್ಥಾನದ ಮೊದಲ ದಿವಾನರಾಗಿ ಸೇವೆ ಸಲ್ಲಿಸಿದ್ದ ಸಿ.ವಿ.ರಂಗಾಚಾರ್ಲು ಸ್ಮರಣಾರ್ಥ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಅವರ ಹೆಸರನ್ನೇ ಇಡಲಾಗಿದೆ. ಗ್ರೀಸ್-ರೋಮನ್ ಶೈಲಿಯಲ್ಲಿ ಇರುವ ಕಟ್ಟಡ 4 ದೊಡ್ಡ ಕಂಬಗಳಿಂದ ಕೂಡಿದ್ದು, ಇದು ಕಟ್ಟಡಕ್ಕೆ ಮೆರುಗು ನೀಡಿದೆ. 1881ರಲ್ಲಿ ಆರಂಭವಾದ ನಿರ್ಮಾಣ ಕಾಮಗಾರಿ 1885ರಲ್ಲಿ ಪೂರ್ಣಗೊಂಡಿತ್ತು. ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಇದನ್ನು ಉಳಿಸಿಕೊಳ್ಳಲು ಪ್ರಜಾಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಹೇಳುವವರಿಲ್ಲ, ಕೇಳುವವರಿಲ್ಲ:
ಪುರಭವನ ಕಟ್ಟಡ ನಿರ್ವಹಣೆಗಾಗಿ ಪಾಲಿಕೆಯಲ್ಲಿ ಪ್ರತ್ಯೇಕ ಸ್ಥಾಯಿ ಸಮಿತಿಯೇ ಇದೆ. ಆದರೆ, ಪುರಭವನ ಸ್ಥಾಯಿ ಸಮಿತಿಗೆ ವರ್ಷಗಳಿಂದ ಅಧ್ಯಕ್ಷರೇ ಇಲ್ಲ. ಪಾಲಿಕೆ ಅಧೀನದಲ್ಲಿರುವ ಈ ಕಟ್ಟಡದ ಸ್ಥಿತಿಗತಿಯನ್ನು ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ.
ಪುರಭವನದ ಆವರಣದಲ್ಲಿ ವಿವಿಧೋದ್ದೇಶದ ವಾಹನಗಳ ನಿಲುಗಡೆ ಕಟ್ಟಡದ ಬಾಕಿ ಕಾಮಗಾರಿ ನಡೆಯುತ್ತಿದೆ. ದಸರಾ ಒಳಗೆ ಕೆಲಸ ಮುಗಿಸಿ ಜನರ ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಆದರೆ, ಪುರಭವನ ಕಟ್ಟಡ ನವೀಕರಣ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾನೂನು ತೊಡಕು ನಿವಾರಣೆ ಮಾಡಿಕೊಂಡು ಆ ಕೆಲಸಕ್ಕೂ ಚಾಲನೆ ನೀಡಲಾಗುವುದು.
ಶಿವಕುಮಾರ್, ಮೇಯರ್