ಜಿಲ್ಲೆ

ಪುರಪ್ರವೇಶಿಸಿದ ಹಿಂದು ಮಹಾಗಣಪತಿಗೆ ಭವ್ಯ ಸ್ವಾಗತ

ಚಿತ್ರದುರ್ಗ: ರಾಜ್ಯ ಮಾತ್ರವಲ್ಲದೆ, ದೇಶದ ಗಮನ ಸೆಳೆದಿರುವ ಐತಿಹಾಸಿಕ ಕೋಟೆನಗರಿಯ ಹಿಂದು ಮಹಾಗಣಪತಿ ಉತ್ಸವದ ಅಂಗವಾಗಿ ಬುಧವಾರ ಪುರಪ್ರವೇಶಿಸಿದ ಮೂರ್ತಿಯನ್ನು ಸಾವಿರಾರು ಭಕ್ತರು ಭವ್ಯವಾಗಿ ಬರಮಾಡಿಕೊಂಡರು.

ಸಾಲಿ ಗ್ರಾಮ, ಶಂಖ, ಗದೆ, ಸುದರ್ಶನ ಚಕ್ರ, ಖಡ್ಗ, ಬಿಲ್ಲು ಕೈಯಲ್ಲಿ ಹಿಡಿದಿರುವ ಅಷ್ಟ ಭುಜಗಳುಳ್ಳ, ಅಭಯ ಹಸ್ತ, ಗರುಡ ವಾಹನದ ಮೇಲೆ ಕುಳಿತಿರುವ ವಿಷ್ಣು ಸ್ವರೂಪಿಯಾದ ಹಿಂದು ಮಹಾ ಗಣಪನನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.

ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗಿರುವ ಸುಮಾರು 14 ಅಡಿ ಎತ್ತರದ ಬೃಹತ್ ಮೂರ್ತಿಯು 3 ದಿನಗಳ ಮುಂಚಿತವಾಗಿಯೇ ಚಿತ್ರದುರ್ಗ ಪ್ರವೇಶಿಸಿದ್ದು, ಮಹೋತ್ಸವ ಆಚರಿಸುವ ಬಿ.ಡಿ. ರಸ್ತೆಯ ಜೈನ್ ಧಾಮದಲ್ಲಿ ಈಗಾಗಲೇ ದಶವತಾರ ಮಾದರಿಯ ಪೆಂಡಾಲ್‌ನ ರಾಜ ದರ್ಬಾರ್‌ನಲ್ಲಿ ರಾರಾಜಿಸುತ್ತಿದ್ದಾನೆ.

ಕಾರ್ಕಳ, ಸಾಗರದವರು ಈ ಬಾರಿ ದರ್ಬಾರ್ ಮಾದರಿಯಲ್ಲಿ ಪೆಂಡಾಲನ್ನು ನಿರ್ಮಿಸಿದ್ದು, ಅತ್ಯಾಕರ್ಷಕವಾಗಿದೆ. ಮೂರ್ತಿಯನ್ನು ಪ್ರತಿ ವರ್ಷದಂತೆ ನಗರದ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಜನಪದ ಕಲಾ ಮೇಳಗಳು, ಮಂಗಳ ವಾದ್ಯಗಳೊಂದಿಗೆ ಮಹೋತ್ಸವ ಆಚರಿಸುವ ಸ್ಥಳಕ್ಕೆ ಅದ್ದೂರಿಯಾಗಿ ಕರೆತರಲಾಯಿತು.

ವಿಶ್ವ ಹಿಂದು ಪರಿಷತ್, ಬಜರಂಗದಳ, ಮಹೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಭಕ್ತರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಸೆ. 7ರಿಂದ ಆರಂಭಗೊಂಡು 28ರ ವರೆಗೆ ಮಹೋತ್ಸವವನ್ನು ಭವ್ಯವಾಗಿ ಆಚರಿಸಲಾಗುತ್ತದೆ. 21 ದಿನಗಳ ಕಾಲ ರಾಷ್ಟ್ರಭಕ್ತಿಯ ವಿಚಾರಗೋಷ್ಠಿಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 24ರಂದು ಹೋಮ, 26ರಂದು ಬೈಕ್ ರ್ಯಾಲಿ, 28ರಂದು ಲಕ್ಷಾಂತರ ಭಕ್ತರ ಮಧ್ಯೆ ಬೃಹತ್ ಶೋಭಯಾತ್ರೆ ನಡೆಯಲಿದೆ. ಬಜರಂಗದಳ ರಾಷ್ಟ್ರೀಯ ಸಂಯೋಜಕ ದೆಹಲಿಯ ನೀರಜ್ ದೊರೇನಿಯಾ ಶೋಭಯಾತ್ರೆಗೆ ಚಾಲನೆ ನೀಡಲಿದ್ದಾರೆ.