ಜಿಲ್ಲೆ

ಪುರದಮ್ಮ ದೇವಸ್ಥಾನಕ್ಕೂ ದಯಾನಂದನಿಗೂ ಯಾವುದೇ ಸಂಬಂಧವಿಲ್ಲ :ಪ್ರಕಾಶ್

ಹಾಸನ: ಅತ್ಯಾಚಾರದಲ್ಲಿ ಆರೋಪದಲ್ಲಿ ಬಂಧಿತನಾಗಿರುವ ಅರಸೀಕೆರೆಯ ದಯಾನಂದ ಎಂಬಾತನಿಗೂ ಪುರದಮ್ಮ ದೇವಸ್ಥಾನಕ್ಕೂ ಯಾವುದೇ ರೀತಿ ಸಂಬಂಧವಿಲ್ಲ. ಆತ ದೇವಸ್ಥಾನದ ಅರ್ಚಕನಲ್ಲ, ಇದರಿಂದ ನಿಜವಾದ ದೇವಸ್ಥಾನದ ಅರ್ಚಕನಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ದೇವಸ್ಥಾನದ ಭಕ್ತರು ಹಾಗೂ ಸೊಪ್ಪಿನಹಳ್ಳಿ ಗ್ರಾಮದ ಮುಖಂಡ ಪ್ರಕಾಶ್ ಸ್ಪಷ್ಟಪಡಿಸಿದರು.
ಇಡೀ ರಾಜ್ಯದಲ್ಲಿ ಹಾಸನದ ಪುರುದಮ್ಮ ದೇವರು ಹೆಸರುವಾಸಿಯಾಗಿದೆ. ಈ ದೇವರಿಗೆ ಕಳಂಕ ತರುವ ನಿಟ್ಟಿನಲ್ಲಿ ಅರ್ಚಕ ಎಂದು ಹೇಳಿಕೊಂಡು ಇಲ್ಲಸಲ್ಲದ ಕೆಲಸ ಮಾಡಿರುವ ದಯಾನಂದನಿಗೂ ದೇವಸ್ಥಾನಕ್ಕೂ ಸಂಬಂಧವಿಲ್ಲ. ಈ ದೇವಸ್ಥಾನವು ಮುಜರಾಯಿ ಇಲಾಖೆಯ ಎ ಗ್ರೇಡ್‌ನಲ್ಲಿದ್ದು, ಇದಕ್ಕೆ ಅಶೋಕ್ ಎಂಬತನನ್ನು ಸರ್ಕಾರದಿಂದ ನೇಮಿಸಿ ಸಂಬಳವೂ ಕೂಡ ಬರುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮತ್ತು ಪತ್ರಿಕೆ ಹಾಗೂ ದೃಶ್ಯಮಾಧ್ಯಮದಲ್ಲಿ ಪುರದಮ್ಮ ದೇವಸ್ಥಾನದ ಅರ್ಚಕ ಎಂದು ಪ್ರಸಾರವಾಗಿದೆ. ಇದರಿಂದ ನಿಜವಾದ ಅರ್ಚಕನಿಗೆ ತುಂಬಾ ನೋವುಉಂಟಾಗುತ್ತಿದೆ. ಅಲ್ಲದೆ, ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಆಗಮಿಸುತ್ತಿದ್ದು, ಅವರೆಲ್ಲರಿಗೂ ಕೂಡ ತಪ್ಪು ಮಾಹಿತಿ ಹೋಗುತ್ತಿದೆ. ಆದ್ದರಿಂದ ದೇವಸ್ಥಾನಕ್ಕೂ ದಯಾನಂದ ಎಂಬಾತನಿಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದರು
ರಾಜ್ಯದ ನಾನಾ ಭಾಗಗಳಿಂದ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಸುತ್ತಮುತ್ತ ಅನಧಿಕೃತವಾಗಿ ದೇವರ ಪೀಠವನ್ನು ಬಾಡಿಗೆ ಕೊಡುವುದು, ತಡೆ ಹೊಡೆಯುವುದು, ವಾಮಾಚಾರ ಮಾಡುವುದು, ಮುಗ್ದ ಭಕ್ತಾದಿಗಳಿಗೆ ಮೋಸ ಮಾಡಿ ತಗಡು ಬರೆಯುವುದು ಮತ್ತು ಸುಳ್ಳು ಹೇಳಿಕೊಂಡು ಬಲಿಕೊಡುವ ರೀತಿ ನಡೆಯುತ್ತಿದೆ ಇದನ್ನ ಯಾರು ಕೂಡ ನಂಬಬಾರದು ಮತ್ತು ಇದನ್ನ ತಡೆಗಟ್ಟುವಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಪ್ಪಿನಹಳ್ಳಿ ಗ್ರಾಮದ ರವಿ,ದಿನೇಶ ಇದ್ದರು