ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿರುವ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತೋತ್ಸವ ಕಾರ್ಯಕ್ರಮದ ಮೂರನೇ ದಿನವಾದ ಭಾನುವಾರ ರಾತ್ರಿ ನಟ ಶಿವರಾಜ್‌ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ದರೆ, ಸ್ಯಾಂಡಲ್‌ವುಡ್ ನಟ-ನಟಿಯರು ಸಭಿಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು.
ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರು ಸಂಗೀತದ ಸುಧೆ ಹರಿಸಿದರು. ವಿಜಯ ಪ್ರಕಾಶ್ ಭಾವಪೂರ್ಣವಾಗಿ ಹಾಡಿದ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ’ ಹಾಡಿಗೆ ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದ ಜನ ಎದ್ದು ನಿಂತು ಅಪ್ಪು ಸ್ಮರಣೆಯೊಂದಿಗೆ ನಮನ ಸಲ್ಲಿಸಿದರು. ಗಾಯಕಿಯರಾದ ಶಶಿಕಲಾ, ಚೈತ್ರಾ ಹಾಡಿನ ಮೂಲಕ ರಂಜಿಸಿದರೆ, ನಟಿಯರಾದ ವೈಷ್ಣವಿ ಗೌಡ ಮತ್ತು ಶರ್ಮಿಳಾ ಗೌಡ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ಮಜಾಭಾರತ ಖ್ಯಾತಿಯ ಜಗಪ್ಪ ತಂಡದಿಂದ ಹಾಸ್ಯದ ಹೊನಲು ಹರಿಯಿತು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರುದ್ರ ಮಾಸ್ಟರ್ ತಂಡ ನಡೆಸಿಕೊಟ್ಟ ನೃತ್ಯ ಎಲ್ಲರನ್ನೂ ರಂಜಿಸಿತು. ಸಂಗೀತ ರಸ ಸಂಜೆಯಲ್ಲಿ ತಮ್ಮ ನೆಚ್ಚಿನ ಗೀತೆಗಳಿಗೆ ಜನ ಕುಣಿದು ಕುಪ್ಪಳಿಸಿದರು. ಇಡೀ ಕ್ರೀಡಾಂಗಣದಲ್ಲಿ ಪುನೀತ್ ಭಾವಚಿತ್ರವಿರುವ ಕನ್ನಡ ಬಾವುಟ ಹಾರಾಡಿದವು. ಕಾರ್ಯಕ್ರಮ ಪ್ರಾರಂಭವಾದಗಿನಿಂದ ಕೊನೆಯವರೆಗೂ ಪುನೀತ್ ಅಭಿಮಾನಿಗಳು ಅಪ್ಪು, ಅಪ್ಪು, ಅಪ್ಪು ಎಂದು ಜೈಕಾರ ಕೂಗಿದರು. ನಿರೂಪಕಿ ಅನುಪಮಾ ತಮ್ಮ ಮೊನಚು ಮತ್ತು ಹಾಸ್ಯಭರಿತ ಮಾತುಗಳಿಂದ ಜನರ ಗಮನ ಸೆಳೆದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಅಮೆರಿಕದ ಅಕ್ಕ ಒಕ್ಕೂಟದ ಅಧ್ಯಕ್ಷ ಅಮರನಾಥ್ ಗೌಡ ಉದ್ಘಾಟಿಸಿದರು.
ವೇದ ಚಿತ್ರದ ಆಡಿಯೋ ರಿಲೀಸ್: ಇದೇ ಸಂದರ್ಭದಲ್ಲಿ ಅದ್ದೂರಿ ವೇದಿಕೆಯಲ್ಲಿ ನಟ ಶಿವರಾಜ್‌ಕುಮಾರ್ ಅಭಿನಯದ, ನಿರ್ದೇಶಕ ಹರ್ಷ ನಿರ್ದೇಶನದ ಹಾಗೂ ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ 125ನೇ ಚಿತ್ರ ‘ವೇದ’ ಸಿನಿಮಾದ ‘ಗಿಲ್ಲಕೋ ಶಿವ’ ಆಡಿಯೋ ಬಿಡುಗಡೆ ಮಾಡಲಾಯಿತು.
ನಟ ಶಿವರಾಜ್‌ಕುಮಾರ್ ಮಾತನಾಡಿ, ನಮ್ಮ ಹೋಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ‘ವೇದ’ ಸಿನಿಮಾದ ಹಾಡನ್ನು ಪಾಂಡವಪುರದಲ್ಲಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ಚಿತ್ರ ನಿರ್ದೇಶಕ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜತೆಗೂಡಿ ನಿರ್ಮಿಸಿರುವ ಎಲ್ಲ ಚಿತ್ರಗಳು ಹಿಟ್ ಆಗಿವೆ. ಭಂಜರಂಗಿ, ಭಜರಂಗಿ-2, ವಜ್ರಕಾಯ ಸಿನಿಮಾಗಳಂತೆ ‘ವೇದ’ ಚಿತ್ರದ ಹಾಡುಗಳೂ ತುಂಬ ಚೆನ್ನಾಗಿ ಮೂಡಿಬಂದಿವೆ. ಇಂದು ಗಾಯಕಿ ಮಂಗ್ಲಿ ಹಾಡಿರುವ ಸಾಂಗ್ ರಿಲೀಸ್ ಮಾಡಲಾಗಿದೆ. ಸಿನಿಮಾದಲ್ಲಿ ಇನ್ನೂ ಐದು ಹಾಡುಗಳಿವೆ ಇದೊಂದು ವಿಭಿನ್ನ ಸಿನಿಮಾವಾಗಿದ್ದು, ಈ ಸಿನಿಮಾದ ಮೂಲಕ ಶಿವಣ್ಣ ನಿಮಗೆ ಇನ್ನೂ ಹತ್ತಿರವಾಗಲಿದ್ದಾರೆ ಎಂದರು. ಇದೇ ವೇಳೆ ಶಿವರಾಜ್‌ಕುಮಾರ್ ದಂಪತಿಯನ್ನು ಶಾಸಕ ಸಿ.ಎಸ್.ಪುಟ್ಟರಾಜು ದಂಪತಿ ಸನ್ಮಾನಿಸಿದರು.