ಜಿಲ್ಲೆ

ಪುನರ್ವಸತಿಗಾಗಿ ಅನುದಾನ ಬಿಡುಗಡೆಗೆ ಕ್ರಮ ವಹಿಸಿ

ಹನೂರು: ಗ್ರಾಮ ಸ್ಥಳಾಂತರ ಸಂಬಂಧ ಪುನರ್ವಸತಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ಅಗತ್ಯ ಕ್ರಮವಹಿಸುವಂತೆ ತಾಲೂಕಿನ ಚಂಗಡಿ ಗ್ರಾಮಸ್ಥರು ಬುಧವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಆರ್.ನರೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

ಈ ವೇಳೆ ಗ್ರಾಮದ ಕರಿಯಪ್ಪ ಮಾತನಾಡಿ, ಗ್ರಾಮದ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡು 2 ವರ್ಷವೇ ಕಳೆದಿದ್ದು, ಇಲ್ಲಿನ 246 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ವೈಶ್ಯಂಪಾಳ್ಯದ ಬಳಿ ಸ್ಥಳವನ್ನು ಸಹ ಗುರ್ತಿಸಲಾಗಿದೆ. ಈ ಕುಟುಂಬಗಳಿಗೆ ಸರ್ಕಾರ 2 ರೀತಿಯಲ್ಲಿ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಅದರಲ್ಲಿ ಮೊದಲನೆ ಪ್ಯಾಕೇಜ್‌ನಲ್ಲಿ ಪ್ರತಿ ಕುಟುಂಬಕ್ಕೂ 15 ಲಕ್ಷ ರೂ. ಜತೆಗೆ ಮನೆ, ನಿವೇಶನ ಹಾಗೂ ಜಮೀನಿಗೆ ಸರ್ಕಾರದಿಂದ ಪರಿಹಾರ ನೀಡುವುದು. ಹಾಗೆಯೇ 2ನೇ ಪ್ಯಾಕೇಜ್‌ನಲ್ಲಿ 3 ಎಕರೆ ಜಮೀನು, ನಿವೇಶನ, ಕೃಷಿ ನೀರಾವರಿ ವ್ಯವಸ್ಥೆ, ವಿದ್ಯುತ್ ಸೌಕರ್ಯ ಒದಗಿಸುವುದಾಗಿ ಘೋಷಿಸಿದೆ. ಆದರೆ ಸರ್ಕಾರದಿಂದ ಇನ್ನು ಅನುದಾನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರಲ್ಲಿ ನಿರಾಶೆಯನ್ನು ಉಂಟು ಮಾಡಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.


ಇದಕ್ಕೆ ಶಾಸಕ ಆರ್.ನರೇಂದ್ರ ಪ್ರತಿಕ್ರಿಯಿಸಿ, ಈ ಸಂಬಂಧ ಜ.11 ರಂದು ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಅರಣ್ಯ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗಮನಕ್ಕೆ ತರಲಾಗಿದ್ದು, ಸಿಎಂ ಆದೇಶವಷ್ಟೇ ಬಾಕಿ ಇದೆ ಎಂದು ತಿಳಿದಿದೆ. ಆದ್ದರಿಂದ ಈ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ ಅನುದಾನದ ಬಿಡುಗಡೆಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರಾದ ದೊಡ್ಡೇಗೌಡ, ಬಸವರಾಜು, ಹುಚ್ಚಿರೇಗೌಡ, ದೇವರಾಜು, ಉದೇಶ್, ಮಹದೇವ, ಚಿಕ್ಕಮಾದು, ಮಾರೇಗೌಡ, ಶಿವಣ್ಣ ಇನ್ನಿತರರಿದ್ದರು.