ಜಿಲ್ಲೆ

ಪುತ್ರನ ಭವಿಷ್ಯ ಅಪ್ಪನ ಹೆಗಲಿಗೆ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್ ಸ್ಪರ್ಧೆ ಕುರಿತಂತೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರಿಗೆ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ವಹಿಸಿತು.
ನಗರದ ಎಸ್‌ಜಿ ಕನ್ವೆಷನ್‌ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆ ಉದ್ಘಾಟಿಸಿದ ಚಂದ್ರಪ್ಪ ಮಾತನಾಡಿ, ಪುತ್ರ ರಘುಚಂದನ್‌ಗೆ ಟಿಕೆಟ್ ಅಂತಿಮವಾಗಿತ್ತು. ಆದರೆ, ಬಿ.ಎಸ್.ಯಡಿಯೂರಪ್ಪ ಅವರ ಕಾರಣಕ್ಕೆ ತಪ್ಪಿತು ಎಂದು ಬೇಸರಿಸಿದರು.
ನಾನು ಯಡಿಯೂರಪ್ಪ ಅವರಿಗೆ ಏನು ಅನ್ಯಾಯ ಮಾಡಿದ್ದೇ, ನನ್ನ ಮಗ ಯಾವ ಪಾಪ ಮಾಡಿದ್ದ ಎಂದು ಗದ್ಗದಿತರಾಗಿ ಪ್ರಶ್ನಿಸಿದರು.
ಕ್ಷೇತ್ರಕ್ಕೆ ದೂರದವರ ಅಗತ್ಯ ಏನಿತ್ತು ಎಂದು ಪ್ರಶ್ನಿಸುವ ಮೂಲಕ ಕಾರಜೋಳ ವಿರುದ್ಧ ಕಿಡಿಕಾರಿದ ಚಂದ್ರಪ್ಪ, ನನ್ನ ರಾಜಕೀಯ ಶಕ್ತಿ ಸಾಮರ್ಥ್ಯ ಏನೆಂಬುದನ್ನು ತೋರಿಸುವೆ ಎಂದು ಸವಾಲು ಹಾಕಿದರು.
ರಘುಚಂದನ್ ಮಾತನಾಡಿ, ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಕೊನೆಗಳಿಗೆಯಲ್ಲಿ ಅನ್ಯಾಯ ಮಾಡಿದರು. ಕಾರ‌್ಯಕರ್ತರು ಹಾಗೂ ತಂದೆಯವರ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ. ಟಿಕೆಟ್ ತಪ್ಪಿಸಿದ ಪರಿಣಾಮ ಏನಾಗಲಿದೆ ಎಂಬುದು ಚುನಾವಣೆಯಲ್ಲಿ ತಿಳಿಯಲಿದೆ ಎಂದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಹೊಳಲ್ಕೆರೆ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ, ಜಿಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ತೀರ್ಥಪ್ಪ, ದೇವಣ್ಣ, ನಂದೀಶ್ ಮತ್ತಿತರರು ಮಾತನಾಡಿದರು.
ಹೊಳಲ್ಕೆರೆ ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್‌ಕುಮಾರ್ ನಿರ್ಣಯ ಮಂಡಿಸಿದರು.
ನಗರಸಭೆ ಸದಸ್ಯ ಶಶಿಧರ್, ಮಾಜಿ ಸದಸ್ಯರಾದ ಮಂಜುನಾಥ್, ರವಿಶಂಕರ್‌ಬಾಬು, ಡಿ.ಸಿ.ಮೋಹನ್, ದೊರೆಸ್ವಾಮಿ, ಈಶಣ್ಣ, ರುದ್ರಪ್ಪ, ಮಂಜಣ್ಣ, ಚಂದ್ರಶೇಖರ್, ತೀರ್ಥಪ್ಪ, ತಿಮ್ಮಣ್ಣ, ರತ್ನಮ್ಮ, ವೆಂಕಟಪ್ಪ, ರಾಮಗಿರಿ ಕುಮಾರಣ್ಣ, ಅಶೋಕ್, ಅಂಕಳಪ್ಪ, ಪ್ರಕಾಶ್, ಬಿ.ಎಂ.ಶ್ರೀನಿವಾಸ್, ಮುರುಗೇಶ್, ರೂಪಾ ಇತರರಿದ್ದರು.

ಬಾಕ್ಸ್*ಏ.3ರಂದು ನಾಮಪತ್ರ?
ರಘುಚಂದನ್ ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸುವ ಕುರಿತು ಆಲೋಚಿಸಲಾಗುತ್ತಿದೆ ಎಂದು ಚಂದ್ರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ನಡೆ ಏನೆಂಬುದನ್ನು ನಾನು ನಿರ್ಧರಿಸಬೇಕಿದೆ. ನನ್ನ ವಿರುದ್ಧದ ಶಿಸ್ತು ಕ್ರಮವನ್ನು ಗಮನದಲ್ಲಿ ಇಟ್ಟುಕೊಂಡೇ ಹೆಜ್ಜೆ ಇಟ್ಟಿದ್ದೇನೆ ಎಂದರು.