ಮಳವಳ್ಳಿ: ತಾಲೂಕಿನ ಕೆಂಬೂತಗೆರೆ ಅಣ್ಣಹಳ್ಳಿ ಗ್ರಾಮದಲ್ಲಿ ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಗ್ರಾಮದ ಈರಣ್ಣ (35) ಹಾಗೂ ತಂದೆ ಈರೇಗೌಡ (80) ಮೃತರು. ಪುತ್ರ ಈರಣ್ಣ ತಮ್ಮ ಕಾರಿನಲ್ಲಿ ಪ್ರವಾಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದ್ದು, ಡಿ.18ರಂದು ಸೋಮವಾರಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ಹೃದಯಸ್ತಂಭನದಿಂದ ವಾಸ್ತವ್ಯವಿದ್ದ ಲಾಡ್ಜ್‌ನಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದರು. ಜತೆಯಲ್ಲಿದ್ದವರು ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಕುಟುಂಬಸ್ಥರು ಸಾವಿನ ಸುದ್ದಿಯನ್ನು ತಂದೆ ಈರೇಗೌಡರಿಗೆ ತಿಳಿಸಿರಲಿಲ್ಲ. ಮೃತನ ಸಂಬಂಧಿಕರು, ಗ್ರಾಮಸ್ಥರು ಮನೆಯ ಮುಂದೆ ಜಮಾವಣೆಯಾಗುತ್ತಿರುವುದನ್ನು ಗಮನಿಸಿ ಏನಾಗಿದೆ ಎಂದು ಕುತೂಹಲದಿಂದ ನೆರೆದವರನ್ನು ಕೇಳಲಾರಂಬಿಸಿದ್ದಾರೆ.
ಮದ ಹಿರಿಯರು ಸೇರಿಕೊಂಡು ಈರೇಗೌಡರಿಗೆ ಧೈರ್ಯ ಹೇಳುತ್ತಾ ಮಗನ ಅಕಾಲಿಕ ಮರಣದ ಬಗ್ಗೆ ತಿಳಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆರಗಿ ಪುತ್ರಶೋಕವನ್ನು ಸಹಿಸಲಾಗದೇ ಈರೇಗೌಡ ಕುಳಿತಲ್ಲೇ ಕುಸಿದು ಉಸಿರು ಚೆಲ್ಲಿದ್ದಾರೆ.
ತಂದೆ, ಮಗನ ಮರಣದಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿ ಕಣ್ಣೀರು ಹಾಕಿದರು. ಮೃತ ಈರಣ್ಣನಿಗೆ ಕಳೆದೆರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಮಗುವಿದೆ. ಮಂಗಳವಾರ ಮೃತರ ಜಮೀನಿನಲ್ಲಿ ಜೋಡಿ ಶವಗಳ ಅಂತ್ಯಕ್ರಿಯೆ ನೆರವೇರಿತು.