ಜಿಲ್ಲೆ

ಪುತ್ತನಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಆಯೋಜಿಸಲಾಗಿತ್ತು.

ಪುತ್ತನಪುರ, ಹಂಗಳದ ಹೊಸಹಳ್ಳಿ ಗ್ರಾಮಗಳಲ್ಲಿ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಮತ್ತು ಇತರ ಅಭಿವೃದ್ಧಿ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುಂಗಾರಿಗೆ ಅನುಸರಿಸಬೇಕಾದ ಬೆಳೆೆ ನಿರ್ವಹಣಾ ಕ್ರಮಗಳು, ಕೃಷಿಯಲ್ಲಿನ ವಿನೂತನ ತಾಂತ್ರಿಕತೆಗಳ ಕುರಿತು ತಿಳಿಸಿಕೊಟ್ಟರು.

ಸೂಕ್ತ ತಳಿ ಬಿತ್ತನ ಬೀಜದ ಆಯ್ಕೆ, ಬೀಜೋಪಚಾರ, ಗೊಬ್ಬರಗಳ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆ ಕುರಿತು ವಿಜ್ಞಾನಿಗಳಿಂದ ಮಾಹಿತಿ ಒದಗಿಸಲಾಯಿತು. ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ರೈತರಿಗಾಗಿ ಇರುವ ಸರ್ಕಾರಿ ಯೋಜನೆಗಳು, ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಬೀಜೋಪಚಾರ ಅಂದೋಲನದಡಿ ಕೀಟನಾಶಕಗಳನ್ನು ಬಳಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಬೀಜೋಪಚಾರದ ಮಹತ್ವದ ಬಗ್ಗೆ ಮಾಹಿತಿಯನ್ನು ಒದಗಿಸಿ ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ನೀಡಿದರು.

ಕೃಷಿ ಇಲಾಖೆ ಕೃಷಿ ಸಂಜೀವಿನಿ ರಥಕ್ಕೆ ಚಾಲನೆ ನೀಡಿ ಗ್ರಾಮದ ಆಯ್ದ ಸ್ಥಳಗಳಲ್ಲಿ ನಡಿಗೆ ಮೂಲಕ ರೈತಾಪಿ ವರ್ಗದವರಿಗೆ ಅರಿವು ಮಾಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಡಾ.ಚಂದ್ರಶೇಖರ್ ಕಳ್ಳಿಮನಿ, ಡಾ.ಪಂಪನಗೌಡ, ಡಾ.ಶ್ರುತಿ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಸಂಸ್ಥೆ ವಿಜ್ಞಾನಿಗಳಾದ ಡಾ.ಶಾಲಿನಿ ಮತ್ತು ಡಾ.ಅಂಕಿತಾ ಗುಪ್ತ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ತಾಂತ್ರಿಕ ವ್ಯವಸ್ಥಾಪಕರಾದ ವೀಣಾ, ನಂದಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ, ಉಪಾಧ್ಯಕ್ಷ ಪಿ.ಎಸ್.ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಪ್ಪ, ಪ್ರಗತಿ ಪರ ರೈತರಾದ ಶಿವಣ್ಣ, ಪವಿತ್ರಕುಮಾರ್, ಕೆಂಪರಾಜು ಇದ್ದರು.