ಮೇಲುಕೋಟೆ: ಪುತಿನ ರಚಿಸಿದ ಸಾಹಿತ್ಯಗಳಿಗೆ ಸಮಾಜವನ್ನು ಬದಲಿಸುವ ಶಕ್ತಿ ಇದೆ. ಭಾವನೆಗಳನ್ನು ಅರಳಿಸುವ ಹಾಗೂ ಕೆರಳಿಸುವ ಶಕ್ತಿಯಿದ್ದು, ಯುವ ಪೀಳಿಗೆ ಸಾಹಿತ್ಯಾಸಕ್ತರಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಪುತಿನ ಕಲಾಮಂದಿರದಲ್ಲಿ ಸೋಮವಾರ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪುತಿನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪುತಿನ ಪುಣ್ಯಸ್ಮರಣೆ ಹಾಗೂ ಕಾಲೇಜುಗಳಲ್ಲಿ ಡಾ.ಪುತಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜಿಲ್ಲೆ, ನೆಲ-ಜಲ, ಸಂಸ್ಕೃತಿಗೆ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹೆಸರಾಗಿದೆ. ಪುತಿನ, ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಅನೇಕ ದಿಗ್ಗಜರು ನೀಡಿರುವ ಕೊಡುಗೆ ಅಪಾರ. ಸಾಹಿತಿಗಳಿಲ್ಲದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಹಿತ್ಯ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಲೇಖನ ಹಾಗೂ ಕೃತಿಗಳ ಮೂಲಕ ಜನರಿಗೆ ತಿಳಿಸುವ ಕಾರ್ಯವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ಸಾಹಿತಿಗಳಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪುತಿನ, ದ.ರಾ.ಬೇಂದ್ರೆ, ಕುವೆಂಪು ಅವರ ಸಾಹಿತ್ಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದರು.
ಪ್ರಜಾಪ್ರಭುತ್ವದ ಉಳಿವಿಗೆ ಯುವ ಸಮುದಾಯ ಪಾತ್ರ ಬಹುಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಪುತಿನ ಟ್ರಸ್ಟ್ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ಗಳ ಸಮಗ್ರ ಅಭಿವೃದ್ಧಿಪಡಿಸುತ್ತೇನೆ ಎಂದರು.
ಪುತಿನ ಟ್ರಸ್ಟ್ ಅಧ್ಯಕ್ಷ ಪ್ರೊ. ಎಂ.ಕೃಷ್ಣೇಗೌಡ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾಜದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರ ಪಾತ್ರ ಎಷ್ಟು ಮುಖ್ಯವೋ ಸಾಹಿತಿಗಳ ಪಾತ್ರವೂ ಅಷ್ಟೇ ಬಹುಮುಖ್ಯವಾಗಿದೆ. ಸರ್ಕಾರ ಪುತಿನ ಮನೆ ಹಾಗೂ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಜತೆಗೆ ಹುಟ್ಟೂರು ಮೇಲುಕೋಟೆಯಲ್ಲಿ ಭವ್ಯವಾದ ಕಲಾಮಂದಿರ ನಿರ್ಮಿಸಿದೆ. ಆದರೆ, ಅವರ ಸಮಾಧಿ ಸ್ಥಳ ಕಸದ ತೊಟ್ಟಿಯಾಗಿದೆ. ಬಯಲು ಕಲಾಮಂದಿರಕ್ಕೆ ಛಾವಣಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪುತಿನ ಕೃತಿ, ನಾಟಕಗಳನ್ನು ಆಡಿಯೋ ಹಾಗೂ ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಡಾ.ಮೀರಾ ಶಿವಲಿಂಗಯ್ಯ, ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಗ್ರಾಪಂ ಅಧ್ಯಕ್ಷೆ ಭವಾನಿ ಹರಧರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ್ ಮೇನಾಗ್ರ, ನಂದೀಶ್ ಪಾಲ್ಗೊಂಡಿದರು.
ಪ್ರಾಧಿಕಾರ ರಚನೆಗೆ ಪ್ರಯತ್ನ
ಕ್ಷೇತ್ರದ ಅಭಿವೃದ್ಧಿಗೆ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುತ್ತದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾದ ಮೇಲುಕೋಟೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಯತ್ನ ಮಾಡುತ್ತೇನೆ ಎಂದರು.
-------------
20/10
ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಪುತಿನ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.