ಬಾಗಲಕೋಟೆ: ಬಿಎಲ್‌ಡಿಇ ಸಂಸ್ಥೆಯನ್ನು ಪೂಜ್ಯ ಬಂತನಾಳ ಸ್ವಾಮೀಜಿ, ಹಳಕಟ್ಟಿ ಅವರು ಸೇರಿದಂತೆ ನೇಕ ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವ ಹಾವು ನೀನು. ನಿನಗೆ ತಾಕತ್ತಿದ್ದರೆ ಬಿಎಲ್‌ಡಿಇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು, ಸ್ವತಂತ್ರವಾಗಿ ನೀನು ಒಂದು ಸಂಸ್ಥೆ ಕಟ್ಟಿ, ಇದು ನನ್ನ ಕೊಡುಗೆ ಎಂದು ಹೇಳು ನೋಡೋಣ. ಎರಕೊಂಡವರು ಕೆಳಗೆ ಬಗ್ಗಿಕೊಂಡು ಜಳಕ ಮಾಡುವುದನ್ನು ಕೈಬಿಡು.
ಹೀಗೆ ಕೈಗಾರಿಕೆ ಸಚಿವ, ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ವಿರುದ್ಧ ಭಾನುವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಏಕವಚನದಲ್ಲೆ ತೀವ್ರ ವಾಗ್ದಳಿ ನಡೆಸಿದ ಪರಿ ಇದು.
ಎಂ.ಬಿ.ಪಾಟೀಲ ಅವರು ನಮ್ಮ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಶೆಡ್ ಗಿರಾಕಿ ಅಂದಿದ್ದಾರೆ. ನನಗೆ ದನಕಾಯೋನು ಎಂದಿದ್ದಾರೆ. ಹೌದು, ನಾನು ದನ ಕಾಯೋನು, ನೀನೇನು? ನಿನ್ನ ಯೋಗ್ಯತೆ ಏನು ಎಂದು ಹಲವಾರು ಪ್ರಶ್ನೆಗಳ ಸುರಿಮಳೆಗೈದರು.
ಎಂ.ಬಿ.ಪಾಟೀಲ ಅವರು ಕಾರಜೋಳ ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ಮಾಡುತ್ತೇನೆ, ರೈತರಿಗೆ ಅನುಕೂಲ ಮಾಡಿಕೊಡುತ್ತೇನೆಂದು ರೈತರನ್ನು ನಂಬಿಸಿದ. ಅತ್ಯಂತ ಕಡಿಮೆ ಬೆಲೆಗೆ ಜಮೀನು ಖರೀದಿಸಿದ, ನಂತರ ಕಾರ್ಖಾನೆಯನ್ನು ತಮಿಳುನಾಡಿನ ಕಂಪನಿಗೆ ಮಾರಾಟ ಮಾಡಿ, ರೈತರಿಗೆ ಮೋಸ ಮಾಡಿ ತಾನು ಮಜಾ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಮಿಸ್ಟರ್ ಎಂ.ಬಿ.ಪಾಟೀಲ ನಿನ್ನ ಗೌಡಕಿ, ಅಧಿಕಾರದ ದರ್ಪ ನಮ್ಮ ಮುಂದೆ ತೋರಿಸಬೇಡ, ನೀನೆ ಅಽಕಾರದಲ್ಲಿ ಇರುವೆ, ಕೈಗಾರಿಕೆ ಇಲಾಖೆಯಲ್ಲಿ ನನ್ನ ಮೇಲಿನ ಆರೋಪಕ್ಕೆ ದಾಖಲೆಗಳನ್ನು ತೋರಿಸು. ನಾನು ಕೈಗಾರಿಕೆ ಸಚಿವ ಇದ್ದಾಗ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ವಿಡಿಯೋ ಮಾಡಿಸಲು ೪.೫೦ ಕೋಟಿ ರೂ.ಗಳ ಒಪ್ಪಂದವನ್ನು ನಮ್ಮ ಅಽಕಾರಿಗಳು ಮಾಡಿಕೊಂಡಿದ್ದರು. ನನಗೆ ಗೊತ್ತಾದ ತಕ್ಷಣ ಅದನ್ನು ತಡೆಹಿಡಿದೆ. ಇದಕ್ಕಾಗಿ ಕಂಪನಿಯವರು ನ್ಯಾಯಾಲಯಕ್ಕೆ ಹೋದರು. ಆದರೆ, ಈ ಪ್ರಕರಣದಲ್ಲಿ ನನ್ನಿಂದ ಸರ್ಕಾರಕ್ಕೆ ಆಗಲಿದ್ದ ೪.೫೦ ಕೋಟಿ ರೂ. ಉಳಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಗ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಸೂಚನೆ ನೀಡಿದ್ದೆ. ಈಗ ನೀನು ಕೈಗಾರಿಕೆ ಸಚಿವನಾಗಿ ಒಂದುವರೆ ವರ್ಷ ಆಗಿದೆ. ಯಾಕೆ ಇಷ್ಟು ದಿನ ಸುಮ್ಮನಿದ್ದಿಯಾ? ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೋ ಎಂದು ಸವಾಲ್ ಹಾಕಿದರು.
ಬಾಗಲಕೋಟೆ ಕೈಗಾರಿಕೆ ಪ್ರದೇಶದಲ್ಲಿ ನಿರಾಣಿ ಅವರು ಸಚಿವರಾಗಿದ್ದಾಗ ೨೦೧೨ರಲ್ಲಿ ತಮ್ಮದೇ ಸಂಸ್ಥೆಗೆ ೨೧ ಎಕರೆ ಜಮೀನು ಪಡೆದಿರುವುದು ಹಾಗೂ ೨೦೨೨ರಲ್ಲಿ ಮತ್ತೆ ಆರು ಎಕರೆ ಜಮೀನು ಖರೀದಿ ಬಗ್ಗೆ ಟೀಕೆ ಮಾಡಿರುವ ಸಚಿವ ಎಂ.ಬಿ.ಪಾಟೀಲ ಅವರಿಗೆ ಖಡಕ್ ಉತ್ತರ ನೀಡಿದ ಮಾಜಿ ಸಚಿವ ನಿರಾಣಿ, ಕೈಗಾರಿಕೆ ಪ್ರದೇಶದಲ್ಲಿ ಶಿಕ್ಷಣ, ಆಸ್ಪತ್ರೆ, ಹೋಟೆಲ್‌ಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ನಾನು ನಿಯಮ ಮಾಡಿದ್ದಲ್ಲ, ಅದು ಮೊದಲೇ ಇತ್ತು ಎಂದರು.
ರಾಜಕಾರಣದಲ್ಲಿ ನೀನು ಸಹ ೪೦ ವರ್ಷದಿಂದ ಇದ್ದಿಯಾ. ಶಾಸಕ, ಸಚಿವರಾಗಿದ್ದೀರಿ. ಹಾಗಿದ್ದರೆ ನಾನು ಭ್ರಷ್ಟಾಚಾರ ಮಾಡಿಲ್ಲ, ಬೇರೆಯವರ ಹೆಸರಿನಲ್ಲಿ ಜಮೀನು ಖರೀದಿ ಮಾಡಿಲ್ಲ, ನಾನು ಅತ್ಯಂತ ಪ್ರಮಾಣಿಕ, ಕಾನೂನು ಮೀರಿ ಶಾಸಕನಾಗಿ ಕೆಲಸ ಮಾಡಿಲ್ಲ ಎಂದು ನಿಮ್ಮ ತಂದೆ-ತಾಯಿ ಮೇಲೆ ಆಣೆ ಮಾಡು ನೋಡೋಣ ಎಂದು ಮಾಜಿ ಸಚಿವ ನಿರಾಣಿ ಅವರು ಸಚಿವ ಎಂ.ಬಿ.ಪಾಟೀಲ ಅವರಿಗೆ ಮತ್ತೊಂದು ಸವಾಲ್ ಎಸೆದರು.
ನೀರಾವರಿ ಸಚಿವನಾಗಿ ನಿನ್ನ ಅವಧಿಯಲ್ಲಿ ಏನೆಲ್ಲ ಆಗಿವೆ. ಎಷ್ಟು ಅಕ್ರಮಗಳು ನಡೆದಿವೆ ಎನ್ನುವ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬಂದು ಬಯಲು ಮಾಡುತ್ತೇನೆ. ಎಂ.ಬಿ.ಪಾಟೀಲ ಅವರು ನೀವು ಕಾಜಿನ ಮನೆಯಲ್ಲಿ ಕುಳಿತು ಕಲ್ಲು ಒಗೆಯುತ್ತಿದ್ದೀರಿ. ನೀನು ಇನ್ನೊಬ್ಬರ ಕಡೆಗೆ ಒಂದು ಬೆರಳು ತೋರಿಸಿದರೆ ಇನ್ನು ನಾಲ್ಕು ಬೆರಳು ನಿಮ್ಮ ಕಡೆಗೆ ಇರುತ್ತವೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಿನ್ನ ಯೋಗ್ಯತೆ ಏನು? ಬಾಗಲಕೋಟೆ-ವಿಜಯಪುರ ಜಿಲ್ಲೆ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು ಹೇಳು. ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಿಂದ ಹೊರಬಂದು ಒಂದು ಸಂಸ್ಥೆ ಕಟ್ಟಿ ತೋರಿಸು ಎಂದು ಚುಚ್ಚಿದರು.