ಅಫಜಲಪುರ: ಸರ್ವ ಪಾಪಗಳ ನಾಶಕ್ಕಾಗಿ ಅಷ್ಟತೀರ್ಥಗಳಲ್ಲೇ ಪ್ರಮುಖವಾದ ಪಾಪನಾಶಕ ತೀರ್ಥಕ್ಕೆ ಇಳಿದವ ಭೀಮಾ ನದಿಪಾಲಾದ ಘಟನೆ ದೇವಲಗಾಣಗಾಪುರದಲ್ಲಿ ಸೋಮವಾರ ನಡೆದಿದೆ.
ಹೈದರಾಬಾದ್ ರಾಮನಗರದ ಎಂ.ಶ್ರವಣಕುಮಾರ (30) ಪಾಪನಾಶಕ ತೀರ್ಥದಲ್ಲಿ ಕಣ್ಮರೆಯಾದವ. ನಾಲ್ವರು ಸ್ನೇಹಿತರ ಜತೆ ಭಾನುವಾರ ರಾತ್ರಿ ಗಾಣಗಾಪುರಕ್ಕೆ ಬಂದಿದ್ದು, ಸೋಮವಾರ ನಸುಕಿನ ಜಾವ ಮೂವರು ಸ್ನೇಹಿತರು ಸ್ನಾನ ಮುಗಿಸಿದ್ದರು. ಬಳಿಕ ಶ್ರವಣಕುಮಾರ ಪುಣ್ಯಸ್ನಾನಕ್ಕಾಗಿ ಪಾಪನಾಶಕ ತೀರ್ಥಕ್ಕಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಭೀಮೆಯ ದಡದ ಅಷ್ಟ ತೀರ್ಥಗಳಲ್ಲಿ ಪುಣ್ಯ ಸ್ನಾನ ಮಾಡಲು ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣ ಸೇರಿ ವಿವಿಧೆಡೆಯ ಅಸಂಖ್ಯ ಭಕ್ತರು ಬರುತ್ತಾರೆ. ಆದರೆ ಭೀಮಾ ಜಲಾನಯನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗಿದ್ದರಿಂದ ಇತ್ತೀಚೆಗಷ್ಟೇ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಭಕ್ತರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಬೇಕಾದ ದೇವಸ್ಥಾನ ಸಮಿತಿ ಹಾಗೂ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷÈ ವಹಿಸಿದ್ದರಿಂದ ನಿರಂತರ ಅವಘಡ ಸಂಭವಿಸುತ್ತಿವೆ ಎಂಬುದು ಭಕ್ತರ ಆರೋಪವಾಗಿದೆ.
ಅಗ್ನಿಶಾಮಕ ದಳದ ಅಶೋಕ ಜಮಾದಾರ, ಮುಬಾರಕ್ ಇಂಡಿಕರ್, ನಾಗಯ್ಯ ದಿಕ್ಸಂಗಿ, ರೇವಣಸಿದ್ದಯ್ಯ ಮಠಮತಿ, ಮಹಾಂತೇಶ ಜಮಾದಾರ, ಶಿವಾನಂದ ಕುಂಬಾರ, ಸದಾನಂದ ಸಿಂಪಿ, ಸಿದ್ದಲಿಂಗ ಪತ್ತಾರ ಇತರರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಟು ತಿಂಗಳಲ್ಲಿ ಐವರ ಸಾವು: ದೇವಲಗಾಣಗಾಪುರದ ಅಷ್ಟ ತೀರ್ಥಗಳಲ್ಲೇ ಪಾಪನಾಶಕ ಪ್ರಮುಖವಾಗಿದ್ದು, ನಿತ್ಯವೂ ಅಸಂಖ್ಯ ಭಕ್ತರು ತೀರ್ಥ ಕುಂಡದಲ್ಲಿ ಮುಳುಗಿ ನಿರ್ಮಲವಾಗುತ್ತಾರೆ. ಕಳೆದ ಎಂಟು ತಿಂಗಳಲ್ಲಿ ಈ ತೀರ್ಥದಲ್ಲಿ ಸ್ನಾನಕ್ಕಿಳಿದ ಐವರು ಮೃತಪಟ್ಟಿದ್ದಾರೆ. ಇಷ್ಟಾದರೂ ದೇವಸ್ಥಾನ ಸಮಿತಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ನದಿ ದಡದಲ್ಲಿ ಕಬ್ಬಿಣದ ಸಲಾಕೆ ಅಳವಡಿಕೆ ಸೇರಿ ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.