ಜಿಲ್ಲೆ

ಪುಣಜನೂರು ಪಿಎಸಿಸಿ ಸೊಸೈಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ

ಚಾಮರಾಜನಗರ: ಪುಣಜನೂರು ಪಿಎಸಿಸಿ ಸೊಸೈಟಿಗೆ 2024- 25 ನೇ ಸಾಲಿನಲ್ಲಿ ವಿವಿಧ ಆದಾಯ ಮೂಲಕ 1. 87 ಲಕ್ಷ ರೂಗ ನಿವ್ವಳ ಲಾಭಗಳಿಸಿದೆ ಎಂದು ಪುಣಜನೂರು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮುತ್ತು ನಾಯಕ ತಿಳಿಸಿದರು.

ತಾಲೂಕಿನ ಪುಣಜನೂರು ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ 2023 -24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು 1700 ಸದಸ್ಯರನ್ನು ಹೊಂದಿರುವ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರು ಮತ್ತು ಶೇ ರುದಾರರು ಹಾಗೂ ಸದಸ್ಯರಿಗೆ ಸಾಲ ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಅವಕಾಶ ಮಾಡಿಕೊಡಲಾಗಿದೆ, ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಚಟುವಟಿಕೆ, ವಾಹನಗಳ ಖರೀದಿ, ಗೃಹಪಯೋಗಿ ವಸ್ತುಗಳ ಖರೀದಿ, ಹಾಗೂ ವ್ಯಾಪಾರ ಅಭಿವೃದ್ಧಿಗಾಗಿ ಸಂಘವು ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಸಂಘದ ನಿರ್ದೇಶಕ ಪಿ. ಕುಮಾರ್ ನಾಯ್ಕ ಮಾತನಾಡಿ, ಪುಣಜನೂರು ಸಹಕಾರ ಸಂಘ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿದೆ, ಸದಸ್ಯರು ಹೆಚ್ಚು ಠೇವಣಿ ನೀಡುವ ಮೂಲಕ 20 ಕೋಟಿ ರೂಗಳು ಹೆಚ್ಚು ವಹಿವಾಟು ನಡೆಸಲಾಗಿದೆ, ಹೀಗಾಗಿ ಸದಸ್ಯರು ಸಂಘದ ಬೆಳವಣಿಗೆಗೆ ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸಿ ಮತ್ತಷ್ಟು ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಂಘದ ಮಾಜಿ ಅಧ್ಯಕ್ಷರು ಹಾಗೂ ಪರಿಸರವಾದಿಗಳು ಆದ ಪುನಜನೂರು ದೊರೆಸ್ವಾಮಿ ಮಾತನಾಡಿ ಈಗಿನ ಸಂಘವು 1939 ರಲ್ಲಿ ಪ್ರಾರಂಭಗೊಂಡಿತು, ಬ್ರಿಟಿಷರ ಆಡಳಿತದಲ್ಲಿ ಜನರಿಗೆ ಅಕ್ಕಿ ನೀಡುತ್ತಿರಲಿಲ್ಲ, ಆ ವೇಳೆ ಇಲ್ಲಿ ಸಂಘ ಸ್ಥಾಪನೆಗೊಂಡು ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಚಟುವಟಿಕೆಯನ್ನು ಪ್ರಾರಂಭಿಸಿತು, ಈಗ ಸಂಘವು ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ, ಸಂಘದಿಂದ ಸದಸ್ಯರಿಗೆ ಅನೇಕ ಪ್ರಯೋಜನಗಳು ಸಿಗಲಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹೆಚ್ಚು ಸೇರು ಹಣ ಇಟ್ಟಿರುವ ಸದಸ್ಯರಿಗೆ ಮತ್ತು ಅತಿ ಹೆಚ್ಚು ಅಂಕ ಪಡೆದ ಎಸೆಸೆಲ್ಸಿ ವಿದ್ಯಾರ್ಥಿನಿಯರಿಗೆ ಶಾಲು ಓದಿಸಿ ಸನ್ಮಾನಿಸಿ ಗೌರವಿಸಲಾಯಿತು.