ಹಾಸನ: ಬೆಳ್ಳಂಬೆಳಗ್ಗೆ ನಗರದ ಹೊರ ವಲಯದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತಾಲೂಕಿನ ನಾಗತವಳ್ಳಿ ಗ್ರಾಮದ ಸತೀಶ (24) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೌಶಿಕ ಗ್ರಾಮದ ರಾಜ, ನಾಗ ಅಲಿಯಾಸ್ ನಾಗೇಶ್ ಹಾಗು ಇನ್ನಿಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಹಿಂದೆ ಸಮುದ್ರವಳ್ಳಿ ಗ್ರಾಮದ ರೌಡಿ ಶೀಟರ್ ಅಶೋಕನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಏಕಾಏಕಿ ಬಂದ ಗುಂಪು, ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಕೌಶಿಕ ಗೇಟ್ ಬಳಿ ಈ ಘಟನೆ ನಡೆದಿದ್ದು,
ಸತೀಶ್ ಎಂಬ ಯುವಕ ಮಾರಣಾಂತಿಕವಾಗಿ ಗಾಯಗೊಂಡು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ನಂದಿನಿ ಪಾರ್ಲರ್ ನಡೆಸುತ್ತಿದ್ದ ಸತೀಶ್ ಮೇಲೆ ಪುಡಿ ರೌಡಿ ರಾಜು ಅಂಡ್ ಗ್ಯಾಂಗ್‌ನಿಂದ ಹಲ್ಲೆ ನಡೆಸಿದೆ ಎಂಬ ಶಂಕೆ ಮೂಡಿದೆ.
ರಾಜು, ಹಿಂದೆ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೇ ರೀತಿ ರಾಜು ಅಂಡ್ ಗ್ಯಾಂಗ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ ಎನ್ನಲಾಗಿದೆ. ಇದರ ಹಿಂದೆ ರೌಡಿಶೀಟರ್ ಸಮುದ್ರವಳ್ಳಿ ಅಶೋಕ್ ಎಂಬಾತನ ಕೈವಾಡವಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಹಣಕ್ಕಾಗಿ ಕೆಲ ದಿನಗಳಿಂದ ಪುಡಿ ರೌಡಿಗಳು ಪೀಡಿಸುತ್ತಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಸ್ಪತ್ರೆಯಲ್ಲಿ ಆಕ್ರೋಶ ಹೊರ ಹಾಕಿದವು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಂಬಂಧಿಕರ ಆಕ್ರೋಶ:
ಪೊಲೀಸರ ನಿರ್ಲಕ್ಷ್ಯವೇ ಸತೀಶ ಮೇಲಿನ ಹಲ್ಲೆಗೆ ಕಾರಣವೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆ ದಿನವೇ ಎಫ್‌ಐಆರ್ ದಾಖಲಿಸಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರಲಿಲ್ಲ. ಈ ಅನ್ಯಾಯದಲ್ಲಿ ಪೊಲೀಸರದು ಪಾಲಿದೆ ಎಂದು ಹಿಡಿಶಾಪ ಹಾಕಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.