ವಿರಾಜಪೇಟೆ: ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖವಾಗಿದ್ದು, ಪುಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಗುರುವಾರ ಅಂಗನವಾಡಿ ಕೇಂದ್ರ ಉದ್ಘಾಟನೆ ಮತ್ತು ಗರ್ಭಿಣಿಯರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಟ್ಟ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ವಿಶ್ವ ಆರೋಗ್ಯ ಸಂಸ್ಥೆಯು ಸಿರಿಧಾನ್ಯಗಳನ್ನು ನೀಡುತ್ತಿದ್ದು, ಇದು ಅರ್ಹ ಫಲಾನುಭವಿಗಳನ್ನು ತಲುಪಬೇಕು. ಈ ಗ್ರಾಮದಲ್ಲಿ ತೆರೆದಿರುವ ಅಂಗನವಾಡಿ ಕೇಂದ್ರ ಖಾಸಗಿ ಕಟ್ಟಡದಲ್ಲಿದೆ. ಸರ್ಕಾರ ಈಗಾಗಲೇ ಆರು ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗ ಗುರುತು ಮಾಡಿ ಅಂಗನವಾಡಿ ಕೇಂದ್ರವನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ಅಂಗನವಾಡಿ ನಿರ್ಮಿಸಲು ಜಾಗದ ಸಮಸ್ಯೆ ಇದ್ದು, ಈ ಸಂಬಂಧ ಜಿಲ್ಲಾಧಿಕಾರಿ ಜತೆ ಮಾತನಾಡಿ ಬಗೆಹರಿಸುವುದಾಗಿ ತಿಳಿಸಿದರು. ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ಉಚಿತ 5 ಕೆ.ಜಿ. ಅಕ್ಕಿ ಕೊಡುತ್ತಿದ್ದು, ಈಗ ಸರ್ಕಾರ 6 ಕೆ.ಜಿ.ಅಕ್ಕಿ ಕೊಡಲು ತೀರ್ಮಾನಿಸಿದೆ ಎಂದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಆರ್.ಶಿವಣ್ಣ ಮಾತನಾಡಿ, ಕೊಟ್ಟೋಳಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸಭೆ, ಸಮಾರಂಭ ನಡೆಸಲು ಸಭಾಂಗಣ ಇಲ್ಲ. ಆದ್ದರಿಂದ ಶಾಸಕರು ಅಂಬೇಡ್ಕರ್ ಭವನಕ್ಕೆ ಅನುದಾನ ಮತ್ತು ಸರ್ಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಶಿಶು ಅಭಿವೃದ್ಧಿ ಯೊಜನಾಧಿಕಾರಿ ರಾಜೇಶ್ ಮಾತನಾಡಿ, ಪೊನ್ನಂಪೇಟೆ-ವಿರಾಜಪೇಟೆ ತಾಲೂಕಿನಲ್ಲಿ ಈಗಾಗಲೇ 335 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ 6 ನೂತನ ಅಂಗನವಾಡಿ ಕೇಂದ್ರಗಳಿಗೆ ಮಂಜೂರಾತಿ ನೀಡಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ರಘು ನಾಣಯ್ಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ಮೇದಪ್ಪ, ಉಪಾಧ್ಯಕ್ಷೆ ಮಿನಾಕ್ಷಿ, ಸದಸ್ಯರಾದ ಪರಮೇಶ್ವರ, ರಾಮಯ್ಯ, ಇಸ್ಮಾಯಿಲ್, ಎಂ.ಪ್ರಶಾಂತ್ ಉತ್ತಪ್ಪ, ವಿಮಲಾ, ವನೀತಾ, ಜಪ್ರೀ ಉತ್ತಪ್ಪ, ಪಿಡಿಒ ಪ್ರಮೋದ್, ಕಾರ್ಯದರ್ಶಿ ಸತೀಶ್, ಮಾಜಿ ಸದಸ್ಯ ಚೋಟು ಬಿದ್ದಪ್ಪ, ಗ್ರಾಮದ ಹಿರಿಯರಾದ ಕುಂಬೆಯಂಡ ಗಣೇಶ್, ಕುವಲೇರ ಉಮ್ಮರ್, ಸಿ.ರತ್ನ ಅಯ್ಯಣ್ಣ, ದಲಿತ ಸಮಿತಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ, ತಾಲೂಕು ಸಂಚಾಲಕ ಲವ ಉಪಸ್ಥಿತರಿದ್ದರು.