ಜಿಲ್ಲೆ

‘ಪುಟಾಣಿ’ಗಳ ಕೈ ಸೇರದ ದಿನಸಿ

ಬಾವನಸೌಂದತ್ತಿ: ತಾಲೂಕಿನಾದ್ಯಾಂತ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಿಗೆ ನೀಡಬೇಕಿದ್ದ ಆಹಾರ ಧಾನ್ಯ ಈವರೆಗೆ ವಿತರಣೆ ಯಾಗದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಬಿಸಿಯೂಟದ ಬದಲಿಗೆ ಆಹಾರ ಧಾನ್ಯಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ವಿತರಿಸಲು ಸರ್ಕಾರ ಆದೇಶಿಸಿತ್ತು. ಸುಮಾರು 5 ಹಂತಗಳಲ್ಲಿ ಕೆಲ ಶಾಲೆಗಳಲ್ಲಿ ಆಹಾರ ಧಾನ್ಯ ವಿತರಿಸಲಾಗಿದೆ. ಆದರೆ, ಕೊನೆಯ ಎರಡು ಹಂತಗಳಲ್ಲಿ ವಿತರಿಸಬೇಕಿದ್ದ ಆಹಾರ ಧಾನ್ಯ ಈವರೆಗೂ ಸರಬರಾಜು ಆಗಿಲ್ಲ. ಈ ಬಗ್ಗೆ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ವಿಚಾರಿಸಿದರೆ, ಕರೊನಾ ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಅಡುಗೆ ಎಣ್ಣೆ ವಿತರಣೆ ಬಾಕಿ

ನಾಲ್ಕನೇ ಹಂತದಲ್ಲಿ ಅಕ್ಕಿ, ಬೇಳೆ, ಗೋಧಿ ವಿತರಿಸಲಾಗಿದೆ. ಆದರೆ, ಪ್ರತಿ ಮಗುವಿಗೆ ಒಂದು ಲೀಟರ್ ಗಾಣದ ಎಣ್ಣೆ ದೊರೆತಿಲ್ಲ. 132 ದಿನಗಳಿಗೆ ಆಹಾರ ಧಾನ್ಯ ವಿತರಿಸಬೇಕಾಗಿತ್ತು. ಈ ಪೈಕಿ ಪ್ರಾಥಮಿಕ ಶಾಲೆಗಳಿಗೆ ಅಕ್ಕಿ, ಗೋಧಿ ವಿತರಿಸಲಾಗಿದೆ. ತೊಗರಿಬೇಳೆ ಮತ್ತು ಅಡುಗೆ ಎಣ್ಣೆ ನೀಡಿಲ್ಲ. ಹಲವು ಪ್ರೌಢಶಾಲೆಗಳಿಗೆ ಅಕ್ಕಿ, ಗೋಧಿ, ಬೇಳೆಯೂ ವಿತರಣೆಯಾಗಿಲ್ಲ. ಕೆಲವೆಡೆ ಅಕ್ಕಿ ವಿತರಣೆಯಾದರೆ, ಇನ್ನೂ ಕೆಲವೆಡೆ ಬೇಳೆ ನೀಡಿಲ್ಲ. ಏಕಕಾಲಕ್ಕೆ ಆಹಾರ ಧಾನ್ಯ ವಿತರಣೆಯಾಗದ್ದರಿಂದ ಪಾಲಕರ ಗೊಂದಲಕ್ಕೆ ಕಾರಣವಾಗಿದೆ.

ಇನ್ನೂ ಬೇಳೆ, ಉಪ್ಪು, ಅಡುಗೆ ಎಣ್ಣೆ ವಿತರಿಸಿಲ್ಲ. ಕರೊನಾದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ತಕ್ಷಣ ವಿತರಿಸಿದರೆ ನೆರವಾಗುತ್ತದೆ.| ಬಾಳು ಕಾಂಬಳೆ ಪಾಲಕ, ಬಾವನಸೌಂದತ್ತಿಬೇಳೆ, ಅಡುಗೆ ಎಣ್ಣೆ ಸರಬರಾಜು ಆಗಬೇಕಿದೆ. ಸದ್ಯ 55 ದಿನಗಳ ಎಣ್ಣೆ ಬಂದಿದ್ದು, ಗುಣಮಟ್ಟ ಪರಿಶೀಲಿಸಿ ಪೂರೈಸುತ್ತೇವೆ. ಉಳಿದ 132 ದಿನಗಳ ಅವಧಿಯ ಎಣ್ಣೆ, ಉಪ್ಪು, ತೊಗರಿಬೇಳೆ ಸರ್ಕಾರದಿಂದ ಸರಬರಾಜು ಆಗಿಲ್ಲ. ಈ ಕುರಿತು ಸಭೆ ನಡೆಸಲಾಗಿದ್ದು, ಸರ್ಕಾರದಿಂದ ಶೀಘ್ರ ಸರಬರಾಜು ಆಗುವ ನಿರೀಕ್ಷೆಯಿದೆ.| ಡಿ.ಎಸ್. ಕುಲಕರ್ಣಿ ಶಿಕ್ಷಣಾಧಿಕಾರಿ, ಚಿಕ್ಕೋಡಿ

| ಸಂತೋಷ ಗಿರಿ ಬಾವನಸೌಂದತ್ತಿ