ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪೊನ್ನಾಚಿ ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆ ಸೆರೆಗೆ ಅನುಮತಿ ಸಿಕ್ಕಿ ತಿಂಗಳಾದರೂ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಲು ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.
ತಾಲೂಕು ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಪೊನ್ನಾಚಿ ಗ್ರಾಮ ಕಾಡಂಚಿನಲ್ಲಿದೆ. ಈ ಭಾಗದಲ್ಲಿ ಅಸ್ತೂರು, ಮರೂರು, ರಾಮೇಗೌಡನಹಳ್ಳಿ, ಕೆಕ್ಕೆಹೊಲ ಹಾಗೂ ಗೇರಟ್ಟಿ ಗ್ರಾಮಗಳಿವೆ. ಇಲ್ಲಿನ ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಭಾಗದಲ್ಲಿ ಮೂರು ತಿಂಗಳಿಂದ ಒಂಟಿ ಸಲಗ ಸಂಚರಿಸುತ್ತಿದ್ದು ತೆಂಗು, ಹಲಸು ಇನ್ನಿತರ ಮರಗಳನ್ನು ನಾಶಪಡಿಸಿದೆ. ಜತೆಗೆ ಜಮೀನುಗಳಿಗೆ ಲಗ್ಗೆ ಇಟ್ಟು ನೀರಾವರಿ ಪರಿಕರಗಳು, ತೆಂಗಿನಮರ, ಫಸಲನ್ನು ನಾಶಪಡಿಸುತ್ತಿದೆ. ಇದರಿಂದ ಒಂದೆಡೆ ಜನರಲ್ಲಿ ಜೀವಭಯ ಆವರಿಸಿದರೆ ಮತ್ತೊಂದೆಡೆ ಫಸಲು ನಾಶದಿಂದ ರೈತರು ಲಕ್ಷಾಂತರ ರೂ.ನಷ್ಟವನ್ನು ಅನುಭವಿಸುತ್ತಿದ್ದಾರೆ.
ಹೆಚ್ಚಾದ ಹಾವಳಿ: ಈ ಹಿಂದೆ ಪುಂಡಾನೆ ರಸ್ತೆ ಬದಿಗೆ ಬಂದು ನಿಂತು ವಾಹನ ಸವಾರರಲ್ಲಿ ಭೀತಿ ಉಂಟು ಮಾಡುತ್ತಿತ್ತು. ಈಗ 3 ತಿಂಗಳಿಂದ ಜಮೀನುಗಳಿಗೆ ನುಗ್ಗಿ ಫಸಲು ನಾಶಪಡಿಸುತ್ತಿದೆ. ಮೇ ತಿಂಗಳಲ್ಲಿ ಪೊನ್ನಾಚಿ ಗ್ರಾಮದ ಸಮೀಪ ಆಗಮಿಸಿದ ಪುಂಡಾನೆ ತೆಂಗು ಹಾಗೂ ಹಲಸಿನ ಮರವನ್ನು ನಾಶಗೊಳಿಸಿ ಜನರನ್ನು ಭಯಭೀತಿಗೊಳಿಸಿತ್ತು. ಜೂ.8ರ ರಾತ್ರಿ ಮತ್ತೆ ಗ್ರಾಮದ ಸಮೀಪ ಆಗಮಿಸಿದ್ದ ಆನೆಯನ್ನು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಜೂ.14 ರಂದು ಮರೂರು ಗ್ರಾಮಕ್ಕೆ ಲಗ್ಗೆ ಇಟ್ಟ ಆನೆ ನಾಗಣ್ಣ ಎಂಬುವರ ಮನೆಯ ಗೇಟ್ ಹಾಗೂ ಬೈಕ್ ಹಾನಿಗೊಳಿಸಿತ್ತು. ಜು.27 ರಂದು ರಾಮಾದಪ್ಪ ಎಂಬುವರ ಜಮೀನಿನಲ್ಲಿ 20 ತೆಂಗಿನಮರ, 5 ಮಾವಿನಮರ, 5 ತೇಗದ ಮರಗಳನ್ನು ನಾಶಗೊಳಿಸಿದೆ. ಇಷ್ಟಾದರೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿಲ್ಲ ಎಂಬುದು ಸ್ಥಳೀಯರ ದೂರು.
ಕಾವಲಿಗೆ ತೆರಳಲು ಭಯ: ಈ ಭಾಗದ ಜಮೀನುಗಳಲ್ಲಿ ರೈತರು ರಾಗಿ, ಮುಸುಕಿನ ಜೋಳ ಬಿತ್ತನೆ ಮಾಡಿದ್ದಾರೆ. ಕಾಡಾನೆ ಭಯದಿಂದ ರಾತ್ರಿ ವೇಳೆ ಜಮೀನುಗಳಿಗೆ ಕಾವಲು ಕಾಯಲು ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಿತ್ತನೆ ಮಾಡಿರುವ ಬೀಜಗಳು ಕಾಡು ಹಂದಿಗಳ ಪಾಲಾಗುತ್ತಿದ್ದು ನಷ್ಟ ಅನುಭವಿಸುವಂತಾಗಿದೆ. ಕೆಲ ರೈತರು ಕಾಡಾನೆ ಭಯದಿಂದ ಜಮೀನು ಪಾಳು ಬಿಟ್ಟಿದ್ದಾರೆ.
3 ತಿಂಗಳಿಂದ ಹಾವಳಿ ನಡೆಸುತ್ತಿರುವ ಪುಂಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ದಿಸೆಯಲ್ಲಿ ಜೂ.8 ರಂದು ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆನೆಯನ್ನು ಸೆರೆ ಹಿಡಿದು ಶಿಬಿರಕ್ಕೆ ಸ್ಥಳಾಂತರಿಸಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಅವರಿಗೆ ಪತ್ರ ಬರೆದಿದ್ದರು. ಅವರು ಜೂ.23 ರಂದು ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಆದೇಶ ನೀಡಿದ್ದಾರೆ. ಅನುಮತಿ ನೀಡಿ ತಿಂಗಳಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ.