ಜಿಲ್ಲೆ

ಪುಂಡಾಟಿಕೆಗೆ ಸಿಡಿದೆದ್ದ ಕನ್ನಡಿಗರು

ಬೆಳಗಾವಿ: ಸಾರಿಗೆ ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲೆ ನಡೆದ ಹಲ್ಲೆ ಹಾಗೂ ಪೋಕ್ಸೋ ಪ್ರಕರಣ ರದ್ದುಪಡಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ನಗರ ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮರಾಠಿಗರ ಪುಂಡಾಟ ಖಂಡಿಸಿದರು. ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಯಾವುದೇ ಕಾರಣಕ್ಕೂ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ಸಹಿಸುವುದಿಲ್ಲ. ಇಲ್ಲಿ ಬೇರೆ ಭಾಷೆ ವೈಭವೀಕರಣಕ್ಕೆ ಅವಕಾಶ ನೀಡಬಾರದು. ಈ ನೆಲದ ಭಾಷೆ ಕಲಿತು ಸಹಬಾಳ್ವೆಯಿಂದ ಇರಬೇಕು. ಇಲ್ಲವಾದರೆ ಮಹಾರಾಷ್ಟ್ರಕ್ಕೆ ಹೋಗಿ ಎಂದು ಗುಡುಗಿದರು.

ಮೌನ ಯಾಕೆ? ಮತ ರಾಜಕಾರಣಕ್ಕಾಗಿ ಮರಾಠಿಗರ ಓಲೈಕೆಗಾಗಿ ಕನ್ನಡಿಗರಿಗೆ ತೊಂದರೆಯಾದರೂ ಮಾತನಾಡದ ಇಲ್ಲಿನ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಕನ್ನಡಿಗರ ಮತದಿಂದ ಆಯ್ಕೆಯಾಗಿ ಕನ್ನಡ ನಾಡು, ನುಡಿ ವಿಷಯದಲ್ಲಿ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದರು.

ಡಿಸಿ ವಿರುದ್ಧ ಕಿಡಿ: ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಇಲ್ಲಿನ ಆಡಳಿತ ಸಂಪೂರ್ಣ ಕನ್ನಡ ಭಾಷೆಯಲ್ಲಿ ಇರಬೇಕು. ಇಲ್ಲಿನ ಜಿಲ್ಲಾಧಿಕಾರಿ ಮರಾಠಿ ಭಾಷೆಯಲ್ಲಿ ದಾಖಲೆ ನೀಡಿದರೆ ತಪ್ಪೇನು? ಎಂದು ಹೇಳಿದ್ದು ಖಂಡನೀಯ. ಇಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾಷೆ ಕಲಿಯಬೇಕು ಎಂದು ಎಚ್ಚರಿಸಿದರು.

ಗಡಿಪಾರು ಮಾಡಿ: ಇನ್ನು ಮುಂದೆ ಕನ್ನಡ ಭಾಷೆ ಮಾತನಾಡಿದರೆ ಹಲ್ಲೆ, ಕನ್ನಡಿಗರ ಮೇಲೆ ದೌರ್ಜನ್ಯ ನಡೆಯದಂತೆ ಜಿಲ್ಲಾಡಳಿತ ಕ್ರಮವಹಿಸಬೇಕು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿನ ಕನ್ನಡಿಗರ ಮೇಲೆ ಅನ್ಯಾಯವಾದರೆ ಕರವೇ ಸಹಿಸುವುದಿಲ್ಲ. ಕೂಡಲೇ ಕಂಡಕ್ಟರ್ ಮೇಲಿನ ಪೋಕ್ಸೋ ಪ್ರಕರಣ ರದ್ದು ಪಡಿಸಬೇಕು ಮತ್ತು ಹಲ್ಲೆ ಮಾಡಿದ ಗುಂಡಾಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಪ್ರಮೋದ ಹೊಸಮನಿ, ರುದ್ರಗೌಡ ಪಾಟೀಲ, ಸುರೇಶ ಗವನ್ನವರ, ಗಣೇಶ ರೋಖಡೆ ಇತರರಿದ್ದರು.