ಸೊರಬ: ವಕೀಲ ಕುಲದೀಪ್ ಶೆಟ್ಟಿ ಅವರನ್ನು ಬಂಧಿಸಿ, ಹಲ್ಲೆ ನಡೆಸಿದ ಮಂಗಳೂರಿನ ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪುಂಜಾಲಕಟ್ಟೆ ಪೊಲೀಸರು ಮಧ್ಯರಾತ್ರಿಯಲ್ಲಿ ಕುಲದೀಪ್ ಅವರ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾರೆ. ಜತೆಗೆ ಅಕ್ರಮವಾಗಿ ಬಂಧಿಸಿ ಅವರ ವಿರುದ್ಧ ಸುಳ್ಳು ಕೇಸನ್ನು ದಾಖಲಿಸಿದ್ದಾರೆ. ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಹಾಗೂ ಕಾನೂನು ರಕ್ಷಣೆ ಮಾಡುತ್ತಿರುವ ವಕೀಲರ ಮೇಲೆ ದೌರ್ಜನ್ಯ ಎಸಗಿ, ಪೊಲೀಸ್ ಅಧಿಕಾರಿಗಳು ಹೆದರಿಸುತ್ತಿದ್ದಾರೆ. ಇಂತಹ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಲ್ಲೆಗೊಳಗಾದ ವಕೀಲರಿಗೆ ಹಾಗೂ ವಕೀಲಿ ವೃತ್ತಿಗೆ ನ್ಯಾಯವೊದಗಿಸಬೇಕು. ಇಲ್ಲದಿದ್ದರೆ ವಕೀಲರ ಸಂಘವು ಪೊಲೀಸರ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.