ನ್ಯಾಮತಿ: ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿಸಿ, ಬೆಳಸುವಲ್ಲಿ ಪೀಠ, ಮಠಗಳಷ್ಟೇ ಪತ್ರಿಕೆಗಳ ಪಾತ್ರವೂ ಇದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ನ್ಯಾಮತಿ ತಾಲೂಕು ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮುಖ್ಯವಿದೆ. ಇಂದಿನ ಆಧುನಿಕತೆಯ ಪೈಪೋಟಿ ಮಧ್ಯೆ ವೃತ್ತಿ ಒತ್ತಡದಲ್ಲಿದ್ದರೂ ತಮ್ಮ ವೃತ್ತಿ ನಿಷ್ಠೆ ಮರೆಯದೆ ವಸ್ತುನಿಷ್ಠ ಬರಹಗಳನ್ನು ಬಿತ್ತರಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದಿದೆ ಎಂದರು.
ಪತ್ರಿಕೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಪತ್ರಕರ್ತರ ಪ್ರಮುಖ ಪಾತ್ರವಿದೆ. ಸರ್ಕಾರವು ಪತ್ರಕರ್ತರಿಗೆ ಆರೋಗ್ಯ, ಸಾರಿಗೆಯಂತಹ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಸಂಕಷ್ಟಗಳ ನೆರವಿಗೆ ಧಾವಿಸುವಂತೆ ಸಲಹೆ ನೀಡಿದರು.
ಸಮಾಜದಲ್ಲಿ ಆಸ್ತಿಕರ ಸಂಖ್ಯೆ ಹೆಚ್ಚಾಗಬೇಕು. ಬಹಳಷ್ಟು ಜನ ನಾಸ್ತಿಕರು ತಮ್ಮ ಜೀವಿತದ ಕೊನೆಗಾಲದಲ್ಲಿ ಆಸ್ತಿಕರಾಗಿ ಬದಲಾಗುತ್ತಾರೆ. ವಿಜ್ಞಾನ ಲೋಕವೇ ಒಂದು ಅಗೋಚರ ಶಕ್ತಿ ಇದೆ ಎಂದು ನಂಬುತ್ತದೆ. ಆ ಅಗೋಚರ ಶಕ್ತಿಯೇ ನಾವು ನೀವೆಲ್ಲ ನಂಬುವ ದೇವರಾಗಿದ್ದು ನಿತ್ಯ ಶುದ್ಧತೆ ಮನಸ್ಸಿನಿಂದ ದೇವರಲ್ಲಿ ಒಳಿತಿಗಾಗಿ ಪ್ರಾರ್ಥನೆ ಮಾಡಿದರೆ ನಮ್ಮ ಸಂಕಷ್ಟ ನಿವಾರಣೆಯಾಗುತ್ತವೆ ಎಂದರು.
ಮಣಿಪುರದ ಘಟನೆಗೆ ಖಂಡನೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಜೆ.ಸಿ ಲೋಕೇಶ್ ಮಾತನಾಡಿ, ಪತ್ರಿಕಾ ದಿನಾಚರಣೆಯು ಪತ್ರಕರ್ತರ ಹಬ್ಬ ಇದ್ದಂತೆ ಪತ್ರಕರ್ತರಿಗೆ ಬಸ್ ಪಾಸ್, ಪ್ರತಿ ತಾಲೂಕಿನಲ್ಲಿಯೂ ಪತ್ರಿಕಾ ಭವನ, ಬಡ ಪತ್ರಕರ್ತರಿಗೆ ನಿವೇಶನಗಳು ಸರ್ಕಾರದ ಹಂತದಲ್ಲಿ ಸಿಗುವಂತೆ ಆಗಬೇಕು ಎಂದು ಒತ್ತಾಯಿಸಿದರು.
ಸಮಾರಂಭ ಉದ್ಘಾಟಿಸಿ ಶಾಸಕ ಡಿ.ಜಿ ಶಾಂತನಗೌಡರು ಮಾತನಾಡಿ, ಭಕ್ತರು ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಬೇಕು. ಅದರಲ್ಲೂ ಹೆಚ್ಚಿನದಾಗಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬಂದರೆ ಅಧ್ಯಾತ್ಮದ ಜೀವನ ತೆರೆದುಕೊಳ್ಳುತ್ತದೆ ಎಂದರು.
ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಿವೇಶನ ಸಿಕ್ಕರೆ ಪತ್ರಿಕಾ ಭವನ ನಿರ್ಮಾಣ ಮಾಡಲು ಸಹಕಾರ ನೀಡುವುದಾಗಿ ಹೇಳಿದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ನ್ಯಾಮತಿ ತಾಲೂಕು ಗ್ರೇಡ್2 ತಹಸೀಲ್ದಾರ್ ಗೋವಿಂದಪ್ಪ, ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಂಚಾಲಕ ಎಂ.ಎಸ್ ಶಾಸ್ತ್ರಿ ಹೊಳೆಮಠ್ ಮಾತನಾಡಿದರು.
ಪತ್ರಕರ್ತ ಎಚ್.ಬಿ, ಗಿರೀಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಸದ್ಗುರು ಶಿವಯೋಗಿ ಮಹಾಲಿಂ ಞಗ ಹಾಲಸ್ವಾಮೀಜಿ, ಹಾರ‌್ನಹಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ನಟರಾಜ್, ಉಪಾಧ್ಯಕ್ಷೆ ಶ್ವೇತಾ ಹಾಲೇಶ್,ನ್ಯಾಮತಿ ಪಿಎಸ್‌ಐ. ಪಿ.ಎಸ್ ರಮೇಶ್, ಹನುಮನಹಳ್ಳಿ ಬಸವರಾಜಪ್ಪ, ಬೇಡ ಜಂಗಮ ಸಮಾಜದ ಹೊನ್ನಾಳಿ ತಾಲೂಕು ಅಧ್ಯಕ್ಷ ಭೈರನಹಳ್ಳಿ ಪಂಚಾಕ್ಷರಯ್ಯ, ಎಚ್.ಎಂ ಗಂಗಾಧರಯ್ಯ, ರೇಣುಕಾ ಸ್ವಾಮಿ, ಶಿವಮೊಗ್ಗ ಉಮಾದೇವಿ ಚನ್ನೇಶ್, ಪರ್ತಕರ್ತರಾದ ಎಚ್.ಎಂ.ಸದಾಶಿವಯ್ಯ, ಷಣ್ಮುಖ.ಬಿ.ಈ, ಜೆ.ಹಳದಪ್ಪ, ಎಂ.ಪಿಎಂ ಷಣ್ಮುಖಯ್ಯ, ಗೋವಿನಕೋವಿ ಹಾಲಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.