ಜಿಲ್ಲೆ

ಪಿರಿಯಾಪಟ್ಟಣ: ಗುರು-ಶಿಷ್ಯರ ಕಾಳಗ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಗುರು-ಶಿಷ್ಯರ ನಡುವಿನ ಕಾಳಗದಲ್ಲಿ ಚಂಚಲೆಯಾಗಿರುವ ವಿಜಯಲಕ್ಷ್ಮೀ…!
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಚುನಾವಣಾ ಅಖಾಡದ ಸಂಕ್ಷಿಪ್ತ ಚಿತ್ರಣವಿದು. ಜಿದ್ದಾಜಿದ್ದಿನ ಜಂಗೀಕುಸ್ತಿಯಲ್ಲಿ ಯಾರನ್ನು ಯಾರು ಬಗ್ಗುಬಡಿದು ಜಯದ ಮಾಲೆ ಧರಿಸುತ್ತಾರೆ ಎಂಬುದೇ ಕೌತುಕ. ಆದರೆ, ಈ ರೋಚಕ ಹಣಾಹಣಿಯನ್ನು ವೀಕ್ಷಿಸುತ್ತಿರುವ ಬಿಜೆಪಿ ಸಾಂಕೇತಿಕ ಸ್ಪರ್ಧೆಯನ್ನು ಒಡ್ಡಿದೆಯಷ್ಟೇ.

ಯಾರು ಗೆಲ್ಲುತ್ತಾರೆ?
ಶಾಸಕ, ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಮತ್ತು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ನಡುವೆ ಕ್ಷೇತ್ರದಲ್ಲಿ ನೇರಾನೇರ ದಂಗಲ್ ಏರ್ಪಟ್ಟಿದೆ. ಗೆಲುವಿನ ರೇಸ್‌ನಲ್ಲಿ ಒಬ್ಬರು ಇನ್ನೊಬ್ಬರಿಗೆ ತೊಡರುಗಾಲು ಹಾಕುವ ಮೂಲಕ ಮುನ್ನುಗ್ಗಲು ಪ್ರಯತ್ನಿಸಿದ್ದಾರೆ. ಯಾರೇ ಗೆದ್ದರೂ ಅಂತರ ಕಡಿಮೆ ಇರಲಿದೆ. ಆದರೆ, ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದು ಕಷ್ಟಕರವಾಗಿದೆ.


ಸಾಂಪ್ರದಾಯಿಕ ಎದುರಾಳಿಗಳು:
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಬ್ಬರಾದ ಕೆ.ವೆಂಕಟೇಶ್ ಅವರಿಗೆ ಇದು 9ನೇ ಚುನಾವಣೆ. ಇಲ್ಲಿಯವರೆಗೆ 5 ಸಲ ಆಯ್ಕೆಯಾಗಿದ್ದು, 3 ಬಾರಿ ಸೋತಿದ್ದಾರೆ. ಇವರ ಶಿಷ್ಯ ಎಂದೇ ಕರೆಯಲಾಗುವ ಕೆ.ಮಹದೇವ್ ಗುರುವಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ.
ಈ ಇಬ್ಬರೂ ಸಾಂಪ್ರದಾಯಿಕ ಎದುರಾಳಿಗಳು 4ನೇ ಸಲ ಪೈಪೋಟಿಗೆ ಇಳಿದಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತುವ ಮೂಲಕ ಮತಪ್ರಚಾರ ಮಾಡುತ್ತಿರುವ ಉಭಯ ಅಭ್ಯರ್ಥಿಗಳು ಆರೋಪ- ಪ್ರತ್ಯಾರೋಪಗಳಲ್ಲೂ ತೊಡಗಿದ್ದಾರೆ.


ಕಳೆದುಹೋದ ಕಮಲ:
ಮಾಜಿ ಸಂಸದ, ಬಿಜೆಪಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ 15 ವರ್ಷಗಳ ಬಳಿಕ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ದಳ-ಕೈ ಪಡೆಯ ಅಬ್ಬರದ ಪ್ರಚಾರ, ರಣತಂತ್ರದ ನಡುವೆ ಇವರು ಕಳೆದುಹೋಗಿದ್ದಾರೆ. ಪ್ರಮುಖರು ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.


ಇಲ್ಲಿ ಕಮಲ ಅರಳಿರುವುದು ಒಮ್ಮೆಯಷ್ಟೇ. ಎಚ್.ಸಿ.ಬಸವರಾಜು ಜಯದೊಂದಿಗೆ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯಲು ಸಾಧ್ಯವಾಗಿದ್ದೇ 1999ರ ಚುನಾವಣೆ. ಬಳಿಕ ಪಕ್ಷಕ್ಕೆ ಗೆಲುವು ಗಗನ ಕುಸುಮವಾಗಿದೆ. ದಳ-ಕೈ ಗುಂಪಿನ ಹಣಬಲ, ಆರ್ಭಟಕ್ಕೆ ತಿರುಗೇಟು ಕೊಡಲು ಹೆಣಗಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಷಾ ಪಿರಿಯಾಪಟ್ಟಣದಲ್ಲಿ ರೋಡ್ ಶೋ ನಡೆಸಿದರೂ ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಎಸ್.ಮಂಜುನಾಥ್ (3,974) 3ನೇ ಸ್ಥಾನ ಪಡೆದುಕೊಂಡಿದ್ದರು. ಈ ಸಲವೂ ಬಿಜೆಪಿಯ ವಿಜಯಶಂಕರ್ ತಕ್ಕ ಪೈಪೋಟಿ ನೀಡುವಲ್ಲಿ ಕುಂಟುತ್ತಿರುವುದು ನಕಾರಾತ್ಮಕ ಅಂಶವಾಗಿದೆ.


ಅಭಿವೃದ್ಧಿ ಕಾರ್ಯ ಜಪ:
ಸತತ 2 ಬಾರಿ ಸೋಲು ಕಂಡಿದ್ದ ಜೆಡಿಎಸ್‌ನ ಕೆ.ಮಹದೇವ್ ಕಳೆದ ಚುನಾವಣೆಯಲ್ಲಿ ಜಯ ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಈಗ ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಆದರೆ, ಮರು ಆಯ್ಕೆಗಾಗಿ ಓಡುತ್ತಿರುವ ಇವರಿಗೆ ಹಳೇ ಹುಲಿ ಕೆ.ವೆಂಕಟೇಶ್ ಅಡ್ಡಗಾಲು ಹಾಕುವುದರೊಂದಿಗೆ ಬಂಡೆಗಲ್ಲಿನಂತೆ ನಿಂತಿದ್ದಾರೆ. ಇದಕ್ಕೆ ಪ್ರತಿತಂತ್ರ ಹೂಡುತ್ತಿರುವ ಮಹದೇವ್, ಹೊಸ ಹೊಸ ಪಟ್ಟುಗಳನ್ನೂ ಹಾಕುತ್ತಿದ್ದಾರೆ. ‘ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವೆ. ಮತ್ತೊಂದು ಅವಕಾಶ ನೀಡಿ’ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.


ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಕೆ.ವೆಂಕಟೇಶ್ ‘ಅಭಿವೃದ್ಧಿ ಕಾರ್ಯ’ದ ಮೊರೆ ಹೋಗಿದ್ದು, ‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾಸಕನಾಗಿ ಶಾಲಾ-ಕಾಲೇಜು, ಕೆಎಸ್‌ಆರ್‌ಟಿಸಿ ಡಿಪೋ ಸೇರಿದಂತೆ ಇನ್ನಿತರ ಶಾಶ್ವತ ಅಭಿವೃದ್ಧಿ ಕಾಯಕ ಮಾಡಿರುವೆ. ಹೀಗಾಗಿ, ನನಗೆ ಅವಕಾಶ ನೀಡಿ’ ಎಂದು ಮತದಾರರಲ್ಲಿ ಕೋರುತ್ತಿದ್ದಾರೆ. ಇಬ್ಬರೂ ತಮ್ಮ ಅಭಿವೃದ್ಧಿ ಕಾರ್ಯದ ರಿಪೋರ್ಟ್ ಕಾರ್ಡನ್ನೇ ಝಳಪಿಸುತ್ತಿದ್ದಾರೆ. ಈ ಇಬ್ಬರಲ್ಲಿ ಮತದಾರರು ಯಾರಿಗೆ ಮನ್ನಣೆ ನೀಡುತ್ತಾರೆ ಎಂಬುದು ಫಲಿತಾಂಶದಲ್ಲೇ ಗೋಚರವಾಗಲಿದೆ.

ಜಾತಿ ಸಮೀಕರಣ:
ಹಣ ಬಲದೊಂದಿಗೆ ಜಾತಿಯ ಮಾಯಾಂಗನೆ ಇಲ್ಲೂ ಅಬ್ಬರಿಸುತ್ತಿದ್ದಾಳೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗ ಸಮುದಾಯದವರು. ನಿರ್ಣಾಯಕರಾಗಿರುವ ಈ ಸಮುದಾಯದ ಮತಗಳು ಎರಡು ಕಡೆಗೂ ಹರಿದು ಹಂಚಿಹೋಗಬಹುದು. ಹೀಗಾದರೆ, ಕೈಗೆ ಅನುಕೂಲವಾದರೆ, ದಳಕ್ಕೆ ಮಾರಕವಾಗಲಿದೆ.


ಕುರುಬ ಸಮುದಾಯದ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದವರು ಮತಬುಟ್ಟಿಯನ್ನು ಹಿಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಬಿಜೆಪಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಇದೇ ಸಮುದಾಯದವರು. ಇವರೊಂದಿಗೆ ಈ ಸಮುದಾಯದವರು ಗಟ್ಟಿಯಾಗಿ ನಿಲ್ಲುತ್ತಾರೆ ಎಂಬುದು ಸದ್ಯಕ್ಕೆ ಅಡ್ಡಗೋಡೆ ಮೇಲಿನ ದೀಪದಂತೆ ಗೋಚರವಾಗುತ್ತಿದೆ. ‘ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ’ ಎಂಬ ವಾತಾವರಣವೂ ಅವರ ಶಿಷ್ಯ ವೆಂಕಟೇಶ್‌ಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರು, ದಲಿತರ ಮತಗಳನ್ನು ಸೆಳೆದವರಿಗೆ ಜಯದ ರೇಸ್‌ನಲ್ಲಿ ಇನ್ನಷ್ಟು ಶಕ್ತಿ ದೊರೆಯಲಿದೆ.

2018ರ ಚುನಾವಣೆ ಫಲಿತಾಂಶ
ಗೆದ್ದವರು : ಕೆ.ಮಹದೇವ
ಪಕ್ಷ: ಜೆಡಿಎಸ್
ಪಡೆದ ಮತ: 77,770
ಸೋತವರು: ಕೆ.ವೆಂಕಟೇಶ್
ಪಕ್ಷ: ಕಾಂಗ್ರೆಸ್
ಪಡೆದ ಮತ: 70,277
ಗೆಲುವಿನ ಅಂತರ: 7,493

2013ರ ಫಲಿತಾಂಶ
ಗೆದ್ದವರು : ಕೆ.ವೆಂಕಟೇಶ್
ಪಕ್ಷ: ಕಾಂಗ್ರೆಸ್
ಪಡೆದ ಮತ: 62,045
ಸೋತವರು: ಕೆ.ಮಹದೇವ
ಪಕ್ಷ: ಜೆಡಿಎಸ್
ಪಡೆದ ಮತ: 59,957
ಗೆಲುವಿನ ಅಂತರ: 2,088

ಒಟ್ಟು ಮತದಾರರು: 1,95,458
ಪುರುಷ ಮತದಾರರು: 98106
ಮಹಿಳಾ ಮತದಾರರು: 97345
ಇತರ: 7