ವಿಜಯಪುರ: ಪಪೂ ಶಿಕ್ಷಣ ಇಲಾಖೆ ಮಧ್ಯಂತರ ಪರೀಕ್ಷೆಯನ್ನು ಬೋರ್ಡ್ ನಿಂದಲೇ ನಡೆಸುವುದಾಗಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಸ್ಪಷ್ಟತೆ ಇಲ್ಲ. ಕೂಡಲೇ ಪರೀಕ್ಷೆ ಬಗ್ಗೆ ಸ್ಪಷ್ಟ ರೂಪುರೇಷೆ ನೀಡಬೇಕೆಂದು ವಿಪ ಸದಸ್ಯ ಅರುಣ ಶಹಾಪುರ ಹೇಳಿದರು.
ನ.29 ರಿಂದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಪರೀಕ್ಷೆಯನ್ನು ಅಂತಿಮ ಪರೀಕ್ಷೆ ಎಂದು ಪರಿಗಣಿಸುವುದಾಗಿ ತಿಳಿಸಲಾಗಿದೆ. ಆದರೆ ಅಂತಿಮ ವರ್ಷದ ಪರೀಕ್ಷಾ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆಯಾ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪಪೂ ಶಿಕ್ಷಣ ಇಲಾಖೆ ಪರೀಕ್ಷೆಗೆ ಒಂದು ಪಾವಿತ್ರ್ಯತೆ ಇದೆ. ಕರೊನಾ ಮೂರನೇ ಅಲೆ ಹೆಸರಲ್ಲಿ ಮಧ್ಯಂತರ ಪರೀಕ್ಷೆ ನಡೆಸಿ ಅದನ್ನು ಅಂತಿಮ ಪರೀಕ್ಷೆಗೆ ಪರಿಗಣಿಸುವುದಾಗಿ ಇಲಾಖೆ ಹೇಳಿದೆ. ಇದು ಅತ್ಯಂತ ತರಾತುರಿ ನಿರ್ಧಾರವಾಗಿದೆ.
ಈ ಪರೀಕ್ಷೆಯನ್ನು ಅಂತಿಮ ಪರೀಕ್ಷೆ ಮಾದರಿಯಲ್ಲಿ ನಡೆಸಲಾಗುತ್ತದೆಯಾ? ಪ್ರಶ್ನೆ ಪತ್ರಿಕೆ ವಿತರಣೆ ಮಾದರಿ ಎಂಥದ್ದು? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಅಂತಿಮ ಪರೀಕ್ಷೆ ಮಾದರಿ ಮಧ್ಯಂತರ ಪರೀಕ್ಷೆ ಮಾಡಲು
ಈಗಿರುವ ತಯಾರಿ ಸಾಕಾಗಲ್ಲ. ಮೌಲ್ಯಮಾಪನದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಶಹಾಪುರ ತಿಳಿಸಿದರು.
ಕೆಲವೆಡೆ ಕಾಲೇಜ್ ಆರಂಭವಾಗಿದ್ದೇ ಈಗ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಸುತ್ತೋಲೆ ಹೊರಡಿಸಿದ್ದೇ ಈಚೆಗೆ. ಈ ಮಧ್ಯೆ ಪರೀಕ್ಷೆ ನಡೆಸಲು ಹೊರಡಿಸಿದ್ದು ಅವೈಜ್ಞಾನಿಕ ಎಂದರು.
ತುಘಲಕ್ ಆಡಳಿತಕ್ಕೂ ಪಪೂ ಶಿಕ್ಷಣ ಇಲಾಖೆ ನಿರ್ಧಾರಕ್ಕೂ ವ್ಯತ್ಯಾಸ ಇಲ್ಲವೆಂಬ ಚರ್ಚೆ ನಡೆದಿದೆ. ಈ ಕ್ರಮ ಎಲ್ಲೋ ಅಪಘಾತಕ್ಕೆಡೆ ಮಾಡಲಿದೆ ಎನ್ನಿಸುತ್ತದೆ. ಪಪೂ ಇಲಾಖೆಯ ಸ್ವಾಯತ್ತತೆ ಬಗ್ಗೆ ಮುಖ್ಯಮಂತ್ರಿ ಗಳು ಗಮನ ಹರಿಸಬೇಕು. ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿದ್ದು ಕೂಡಲೇ ಗಮನ ಹರಿಸಬೇಕು. ಇಲಾಖೆಯನ್ನು ಕೂಡಲೇ ರಿಪೇರಿ ಮಾಡಬೇಕೆಂದರು.
ಶಿಕ್ಷಕರ ಕೊರತೆ ತುಂಬಲು ಇಲಾಖೆ ಸಿದ್ದವಿಲ್ಲ. ಅತಿಥಿ ಉಪನ್ಯಾಸಕರನ್ನು ಕೊಟ್ಟಿಲ್ಲ. ಇಂಥದರಲ್ಲಿ ಇಲಾಖೆಯೇ ಪರೀಕ್ಷೆ ನಡೆಸಬೇಕೆಂಬುದರ ಹಿಂದಿನ ಉದ್ದೇಶವೇನೆಂದು ಶಹಾಪುರ ಪ್ರಶ್ನಿಸಿದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಗಳು ಕೂಡಲೇ ಇಲಾಖೆ ಮೇಲೆ ಕ್ರಮ ಕೈಗೊಳ್ಳಬೇಕು. ಪಪೂ ಇಲಾಖೆ ಶೈಕ್ಷಣಿಕ ವಿಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮದೇ
ಸರ್ಕಾರವಿದ್ದರೂ ನಾನೇ ಆರೋಪ ಮಾಡುತ್ತಿದ್ದೇನೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಯೋಚಿಸಬೇಕು ಎಂದರು.
ಹತ್ತು ವರ್ಷದಲ್ಲಿ ಸುಮಾರು 18 ನಿರ್ದೇಶಕರು ಬದಲಾಗಿದ್ದಾರೆ. ಇಲಾಖೆ ಸರಿಪಡಿಸುವುದರಲ್ಲೇ ನಮ್ಮೆಲ್ಲ ಶ್ರಮ ವ್ಯಯವಾಗುತ್ತಿದೆ. ಸರ್ಕಾರದ ನಿಯಮಾವಳಿ ಪಡೆದು ಪರೀಕ್ಷಾ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಆಗುತ್ತಿರುವುದೇನು? ತಜ್ಞರನ್ನು ಕರೆದು ಸಮಾಲೋಚಿಸದೇ, ಉಪನ್ಯಾಸಕರ ಅಭಿಪ್ರಾಯ ಪಡೆಯದೇ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರಲ್ಲದೇ ಕೂಡಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಪಕ ನಿರ್ಧಾರ ತೆಗೆದುಕೊಳ್ಳಬೇಕೆಂದರು.
ಪಪೂ ಕಾಲೇಜ್ ನೌಕರರ ಅಂಘದ ಅಧ್ಯಕ್ಷ ಎಸ್.ಎಸ್. ಗೌರಿ, ರಾಜ್ಯ ಪಪೂ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ.ಎಂ.ಡಿ. ಹೆಬ್ಬಿ, ಎಸ್.ಸಿ. ಸಣ್ಣಹಳ್ಳಿ, ಟಿ.ಆರ್. ಕುಲಕರ್ಣಿ ಮತ್ತಿತರರಿದ್ದರು.