ಚಿತ್ರದುರ್ಗ: ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ನೀಟ್, ಸಿಇಟಿಯಂತೆ ಪಿಯುಸಿ ಪ್ರವೇಶಕ್ಕೂ ಸರ್ಕಾರಿ ಕೋಟಾದ ಶೇ. 50ರಷ್ಟು ಸೀಟುಗಳನ್ನು ರೋಸ್ಟರ್ ಪದ್ಧತಿಯಂತೆ ಕೌನ್ಸೆಲಿಂಗ್ ಮೂಲಕ ಆಯಾ ಜಿಲ್ಲಾ ಪಪೂ ಉಪನಿರ್ದೇಶಕರಿಂದ ಹಂಚಿಕೆ ಮಾಡುವಂತೆ ಆಗ್ರಹಿಸಿ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಸಾಮಾಜಿಕ ನ್ಯಾಯ ಪ್ರತಿ ವಿದ್ಯಾರ್ಥಿಗೂ ಸಿಗಬೇಕು. ಅದಕ್ಕಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಮಾನ ಶೈಕ್ಷಣಿಕ ಅವಕಾಶ ನೀಡಲು ಬದ್ಧತೆ ತೋರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ರೋಸ್ಟರ್ ಪದ್ಧತಿ ಕಡ್ಡಾಯದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಬಡ ವಿದ್ಯಾರ್ಥಿಗಳು ಸರ್ಕಾರ ನಿಗದಿಗೊಳಿಸಿದ ಶುಲ್ಕ ಪಾವತಿಸಿ ಶಿಕ್ಷಣ ಪಡೆಯಬಹುದು. ಒಂದು ವೇಳೆ ಅನುದಾನಿತ, ಖಾಸಗಿ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಳೆದ ವರ್ಷ 1,64,500 ಮಂದಿಗೆ ಸರ್ಕಾರಿ ಶುಲ್ಕದಲ್ಲಿ ಪ್ರವೇಶಾತಿ ಸಿಗಬೇಕಿತ್ತು. ವಾಸ್ತವದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಷ್ಠಿತ ಖಾಸಗಿ ಪಪೂ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಆಗುತ್ತಿಲ್ಲ. ಈ ವರ್ಷದಿಂದಲಾದರೂ ಪರಿಣಾಮಕಾರಿಯಾಗಿ ನಿಯಮ ಜಾರಿಯಾಗಲಿ ಎಂದು ಒತ್ತಾಯಿಸಿದರು.
ಯಾವ ಕಾರಣಕ್ಕೂ ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟ್‌ಗಳ ಹಂಚಿಕೆ, ಪ್ರವೇಶ ನೀಡಿಕೆಯನ್ನು ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗೆ ನೀಡಬಾರದು. ಈಗಾಗಲೇ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಕೋಟಾದಡಿ ಆಯ್ಕೆಯಾದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕ 3132 ರೂ., ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 736 ರೂ. ಶುಲ್ಕವೆಂದು ನೋಟೀಸ್ ಬೋರ್ಡ್‌ಗಳಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಸರ್ಕಾರ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ 255 ರೂ. ಶುಲ್ಕ ನಿಗದಿಪಡಿಸಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕಾಲೇಜು ಅಭಿವೃದ್ಧಿ ಶುಲ್ಕ ಕಡ್ಡಾಯವೆಂದು 1200 ರೂ.ಗಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದು, ಇದನ್ನು ತಡೆದು ಈಗಾಗಲೇ ಪಾವತಿಸಿರುವವರಿಗೆ ಹಿಂದಿರುಗಿಸಲು ಕ್ರಮವಹಿಸಬೇಕು ಎಂದು ಕೋರಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಶಕುಂತಲಮ್ಮ, ವೈ.ರಾಜಣ್ಣ, ಟಿ.ರವಿ, ಜೆ.ಯಾದವರೆಡ್ಡಿ, ಭೀಮನಕೆರೆ ಶಿವಮೂರ್ತಿ, ಕೂನಿಕೆರೆ ರಾಮಣ್ಣ, ಎನ್.ಪ್ರಕಾಶ್, ನನ್ನಿವಾಳ ರಾಜಣ್ಣ, ಧೀಮಂತ್‌ರಾವ್, ಎನ್.ಚಂದ್ರಪ್ಪ, ರಮೇಶ್, ಬಿ.ಎಸ್.ಯೋಗರಾಜ್ ಇತರರಿದ್ದರು.