ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಜೀವನ ಮೌಲ್ಯವನ್ನು ರೂಪಿಸುವ ಮಹತ್ತರವಾದ ಘಟ್ಟವಾಗಿದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ ನಾಗೇಶ್ ತಿಳಿಸಿದರು.
ಪಟ್ಟಣದ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ಶನಿವಾರ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಪಿಯು ಕಾಲೇಜು ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಹಾಗೂ ಒರಿಯೆಂಟೇಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಿಯು ಹಂತದಲ್ಲಿ ಶ್ರಮಪಟ್ಟು ವ್ಯಾಸಂಗ ಮಾಡಿದಾಗ ಮುಂದಿನ ಉನ್ನತ ಮಟ್ಟದ ವ್ಯಾಸಂಗಕ್ಕೆ ಅನುಕೂಲಕರವಾಗಲಿದೆ. ಕಠಿಣ ಶ್ರಮ, ಶ್ರದ್ಧೆಯಿಂದ ವ್ಯಾಸಂಗ ಮಾಡಿದಾಗ ಯಶಸ್ಸು ಖಂಡಿತ ಸಿಗುತ್ತದೆ ಎಂದರು.
ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ತಿರುವಿನ ಹಂತವಾಗಿದೆ. ಪಠ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಕಲಿಕೆಯ ಹಂತದಲ್ಲಿ ಹೆಚ್ಚು ಕನಸುಗಳನ್ನು ಕಾಣಬೇಕು. ಕನಸುಗಳ ಈಡೇರಿಕೆಗೆ ಅಗತ್ಯವಾದ ಕಲಿಕಾ ವೇದಿಕೆಯನ್ನು ನಿರ್ಮಿಸಿಕೊಳ್ಳಬೇಕು. ಜೀವನದಲ್ಲಿ ಗುರುಭಕ್ತಿ, ಸತ್ಯ ಮತ್ತು ನಿಷ್ಠೆಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯೆ ನೀಡಿ ಬದುಕನ್ನು ರೂಪಿಸಿದ ಗುರುಗಳು, ಹೆತ್ತವರಿಗೆ ಕೀರ್ತಿ ತರುವ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ನಿಂತ ನೀರಾಗಬಾರದು. ಬದುಕು ಸದಾ ಹರಿಯುವ ನೀರಿನಂತಾದಾಗ ಮಾತ್ರ ಅವರ ಬದುಕು ಸ್ವಚ್ಛವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ದೆಸೆಯಿಂದಲೇ ಆದರ್ಶ ವ್ಯಕ್ತಿಗಳ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಗುರಿಯಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯ. ಇಲ್ಲಿನ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸಂಸ್ಕಾರಯುತ ಶಿಕ್ಷಣ ನಮ್ಮ ಉದ್ದೇಶ ಎಂದರು.
ಸಂಪನ್ಮೂಲ ವ್ಯಕ್ತಿ ಎಸ್.ವಿ.ಗುರುರಾಜ್ ಮಾತನಾಡಿ, ಪದವಿ ಪೂರ್ವ ಶಿಕ್ಷಣವು ಉನ್ನತ ಶಿಕ್ಷಣಕ್ಕೆ ಅಡಿಪಾಯ. ಭವಿಷ್ಯದ ವೃತ್ತಿ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಒದಗಿಸಿ ಇದು ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ದಾರಿ ಮಾಡಿ ವೃತ್ತಿ ಜೀವನದಲ್ಲಿ ಯಶಸ್ಸಿಗೆ ಅಡಿಪಾಯ ಹಾಕುತ್ತದೆ ಎಂದರು.
ಪದವಿ ಪೂರ್ವ ಶಿಕ್ಷಣವು ಪದವಿ ಮತ್ತು ಸ್ನಾತಕೋತ್ತರ ಹಂತದ ಉನ್ನತ ಶಿಕ್ಷಣಕ್ಕೆ ಅಡಿಪಾಯವಾಗಿದೆ. ಈ ಹಂತದಲ್ಲಿ ಪಡೆದ ಜ್ಞಾನವು ಮುಂದಿನ ಶಿಕ್ಷಣವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿವಿಧ ವೃತ್ತಿ ಜೀವನಗಳಿಗೆ ಅಗತ್ಯವಾದ ಮೂಲ ಕೌಶಲಗಳನ್ನು ಕಲಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತಾವು ಆಯ್ಕೆ ಮಾಡಿಕೊಳ್ಳುವ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವಿಕೆ ಮತ್ತು ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ಕೌಶಲಗಳು ಜೀವನದ ಎಲ್ಲ ಹಂತಗಳಲ್ಲಿಯೂ ಸಹಾಯಕವಾಗಿವೆ. ಆತ್ಮವಿಶ್ವಾಸ, ಸ್ವಯಂ ಪ್ರೇರಣೆ ಮತ್ತು ಜವಾಬ್ದಾರಿಯ ಪ್ರಜ್ಞೆ ಬೆಳೆಸುತ್ತದೆ ಎಂದರು.
ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಈ ಹಂತದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ. ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತೀ ನಾಗೇಶ್, ಡೀನ್ ಸುಜಾ ಫಿಲಿಪ್, ಆಡಳಿತ ಅಧಿಕಾರಿ ಫಿಲಿಪ್, ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.