ಜಿಲ್ಲೆ

ಪಿಯು ಕಾಲೇಜು ಬೋಧಕ ಖಾಲಿ ಹುದ್ದೆ ಭರ್ತಿ ಮಾಡಿ

ಶಿರಸಿ: 1995ರ ನಂತರ ಆರಂಭವಾದ ಕನ್ನಡ ಮಾಧ್ಯಮದ ಶಾಲೆ-ಕಾಲೇಜ್​ಗಳಿಗೆ ಅನುದಾನ ವಿಸ್ತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು. ‘1995ರಿಂದ ವಿವಿಧ ಶಾಲೆ-ಕಾಲೇಜ್​ಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭರವಸೆ ಇಲ್ಲದಾಗಿದೆ. ಆದರೂ ಕನ್ನಡ ಮಾಧ್ಯಮದ ಶಾಲೆ-ಕಾಲೇಜುಗಳನ್ನು ಉಳಿಸುವುದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆ-ಕಾಲೇಜ್​ಗಳಿಗೆ ಅನುದಾನ ನೀಡಬೇಕು. ಎನ್​ಪಿಎಸ್ ಪದ್ಧತಿ ರದ್ದು ಮಾಡಬೇಕು. ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಯಥಾವತ್ ಜಾರಿಗೊಳಿಸಬೇಕು. ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ಅನುದಾನಿತ ಶಾಲೆ ಸಿಬ್ಬಂದಿಗೆ ವಿಸ್ತರಿಸಬೇಕು. ಬೋಧಕ, ಬೋಧಕೇತರ ಖಾಲಿ ಹುದ್ದೆಗಳ ಭರ್ತಿಗೆ ವಿಧಿಸಿದ ಆರ್ಥಿಕ ಮಿತವ್ಯಯ ಹಿಂಪಡೆಯಬೇಕು. ಮಲೆನಾಡು ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿ ಮಿತಿಗೆ ವಿನಾಯಿತಿ ನೀಡಬೇಕು’ ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು. ದಿನೇಶ ನೇತ್ರೇಕರ, ಜಿ.ಯು. ಹೆಗಡೆ, ಎಸ್.ಡಿ. ಮೂಢಣ್ಣನವರ, ಎಂ.ವಿ. ರಾಜಶೇಖರ, ಬಿ.ಎನ್.ನಾಯ್ಕ, ಕಿರಣ ಫರ್ನಾಂಡೀಸ್, ರಾಜೇಶ ನೇತ್ರೇಕರ, ಗುರುಶಾಂತಪ್ಪ, ಲೋಕೇಶ ನಾಯ್ಕ, ಎಂ.ಕೆ. ಭಟ್ಟ, ನವೀನಕುಮಾರ, ಪ್ರಮುಖರಾದ ಶಶಿಭೂಷಣ ಹೆಗಡೆ, ಗಣೇಶ ಹೆಗಡೆ ಇದ್ದರು.