ಸಾಲಿಗ್ರಾಮ: ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಅಭಿವೃದ್ಧಿ ಅಧಿಕಾರಿ ದರ್ಪ ತೋರಿದ್ದಾರೆ ಎಂದು ಆರೋಪಿಸಿ ಬುಧವಾರ ಗ್ರಾಮ ಪಂಚಾಯಿತಿ ಎದುರು ಸದಸ್ಯ ಹೇಮಂತ್ ಪ್ರತಿಭಟನೆ ನಡೆಸಿದರು.
ಸಾಲಿಗ್ರಾಮ ಗ್ರಾಮ ಪಂಚಾಯಿತಿಯಲ್ಲಿ ಮಾ.5ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಬಗ್ಗೆ ಮತ್ತು ವಾರ್ಡ್ ಸಂಬಂಧಪಟ್ಟ ಅಭಿವೃದ್ಧಿ ಕೆಲಸಗಳ ಬಗ್ಗೆ ಸಭೆಯಲ್ಲಿ ದಾಖಲು ಮಾಡಿರುವ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್ ಪಿಡಿಒ ತಿಲಕ್ ರಾಜ್ ಅವರನ್ನು ಕೇಳಿದ್ದಾರೆ. ಅದಕ್ಕೆ ಅವುಗಳನ್ನು ಸದಸ್ಯರಿಗೆ ಕೊಡಲು ಬರುವುದಿಲ್ಲ. ನೀವು ಏನಿದ್ದರೂ ಅರ್ಜಿ ಮೂಲಕ ಕೇಳಿ ಎಂದಿದ್ದಾರೆ. ಸದಸ್ಯನಾದರೂ ನನ್ನ ಮೇಲೆ ಏರು ಧ್ವನಿಯಿಂದ ವರ್ತಿಸುವ ಮೂಲಕ ಅವಮಾನಿಸಿದ್ದಾರೆ. ಅಲ್ಲದೆ ಏರು ಧ್ವನಿಯಲ್ಲಿ ನಮ್ಮನ್ನು ಗದ್ದರಿಸುತ್ತಾರೆ. ಹಾಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಸದಸ್ಯ ಹೇಮಂತ್ ಆರೋಪಿಸಿದರು.
ಸದಸ್ಯರು ಸಭೆಯಲ್ಲಿ ತೀರ್ಮಾನ ಮಾಡಿರುವುದೇ ಒಂದಾದರೆ, ಪಿಡಿಒ ಕೆಲವು ಸದಸ್ಯರಿಗೆ ಗೊತ್ತಿಲ್ಲದೆ ಒಂದಷ್ಟು ಮಾಹಿತಿಗಳನ್ನು ಸೇರಿಸಿಕೊಳ್ಳುತ್ತಾರೆ ಎಂಬ ಅನುಮಾನವಿದೆ. ಹಾಗಾಗಿ ಸಭೆಯ ನಡಾವಳಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಲು ಮಾಹಿತಿ ಕೇಳಿದ್ದೇವೆ. ಸದಸ್ಯರಿಗೆ ಮಾಹಿತಿ ಕೊಡದಿರುವುದು ಅಧಿಕಾರಕ್ಕೆ ಹಕ್ಕುಚ್ಯುತಿ ಮಾಡಿದಂತಾಗಿದೆ. ಪಿಡಿಒ ವಿರುದ್ಧ ತಾಪಂ ಇಒ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನು ಗ್ರಾಮ ಪಂಚಾಯಿತಿ ಸದಸ್ಯ ಶಕೀಲ್ ಅಹಮದ್ ಅವರಿಗೂ ಮಾಹಿತಿ ನೀಡದೆ ಬೇಜವಾಬ್ದಾರಿ ಉತ್ತರ ನೀಡಿ ಅವಮಾನಿಸಿದ್ದಾರೆ. ಕೂಡಲೇ ಪಿಡಿಒ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಜಿಪಂ ಸಿಇಒ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.