ಜಿಲ್ಲೆ

ಪಿಡಿಎ ಕಾಲೇಜು ಪ್ರಾಧ್ಯಾಪಕ ಸಾವು

ಕಲಬುರಗಿ: ಹುಮನಾಬಾದ್ ಮಾರ್ಗದ ಅವರಾದ(ಬಿ) ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಅಮರಾಪುರ ಮೃತರು. ಪತ್ನಿ ರಾಜೇಶ್ವರಿ, ಪುತ್ರಿ ಡಾ.ಮೇಘಾ ಗಾಯಗೊಂಡಿದ್ದು, ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾರೋಗ್ಯದಿಂದಾಗಿ ಕೆಲದಿನ ಡಾ.ಅಮರಾಪುರ ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆದು ಗುಣ ಹೊಂದಿದ್ದರು. ಮಾಸಿಕ ವೈದ್ಯಕೀಯ ತಪಾಸಣೆಗಾಗಿ ತಮ್ಮ ಕಾರಿನಲ್ಲಿ ಪತ್ನಿ, ಪುತ್ರಿಯೊಂದಿಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ಹೊರಟಿದ್ದರು.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ವೇಗದಲ್ಲಿ ಕಾರು ಸೈಡ್ ಹೊಡೆಯಲು ಯತ್ನಿಸಿದಾಗ ಮುಂದೆ ಹೋಗುತ್ತಿದ್ದ ಲಾರಿಗೆ ತರಚಿ ಎದುರಿನಿಂದ ಬಂದ ಕ್ವಾಲಿಸ್ಗೆ ಅಪ್ಪಳಿಸಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಡಾ.ಬಸವರಾಜ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಎದುರಿನ ಕಾರಿನಲ್ಲಿದ್ದವರು ಹೈದರಾಬಾದ್ನಿಂದ ಖ್ವಾಜಾ ಬಂದಾ ನವಾಜ್ ದಗರ್ಾಕ್ಕೆ ಬರುತ್ತಿದ್ದರು. ಇದರಲ್ಲಿದ್ದ ಒಬ್ಬರು ಸಹ ಗಾಯಗೊಂಡಿದ್ದಾರೆ. ಅಪಘಾತದ ಸುದ್ದಿ ಅರಿಯುತ್ತಲೇ ಪಿಡಿಎ ಕಾಲೇಜಿನ ಶಿಕ್ಷಕರು ಸ್ಥಳಕ್ಕೆ ದೌಡಾಯಿಸಿದರು. ಪತ್ನಿ, ಮಗಳನ್ನು ದಾಖಲಿಸಿದ ಆಸ್ಪತ್ರೆ ಎದುರು ಜನರು ಜಮಾಯಿಸಿ ಅಮರಾಪುರ ಅಗಲಿಕೆಗೆ ಕಂಬನಿ ಮಿಡಿದರು.
ಇನ್ಸ್ಪೆಕ್ಟರ್ ಶಾಂತಿನಾಥ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಲಬುರಗಿ ಸಂಚಾರ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.